

ಹೊಳೆನರಸೀಪುರ: ಗಂಡಿನ ಯಶಸ್ಸಿನ ಹಿಂದೆ ಹೆಣ್ಣು ಹೇಗೆ ಮುಖ್ಯವೋ ಅದೇ ರೀತಿ ಹೆಣ್ಣಿನ ಯಶಸ್ಸಿಗೆ ಪುರುಷರು ಸಹ ಕಾರಣಕರ್ತರಾಗುತ್ತಾರೆ. ಆದ್ದರಿಂದ ಲಿಂಗ ತಾರತಮ್ಯ ಸಲ್ಲದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ನಿವೇದಿತ ಮಹಾಂತೇಶ್ ಮುನವಳ್ಳಿ ಮಠ್ ಅಭಿಪ್ರಾಯಪಟ್ಟರು.
ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಸಹಯೋಗದೊಂದಿಗೆ ನ್ಯಾಯಾಲಯದ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ಕೇಕ್ ಕತ್ತರಿಸುವ ಮೂಲಕ ಚಾಲನೆ ನೀಡಿ ಮಾತನಾಡಿ, ಮಹಿಳಾ ದಿನವನ್ನು ನಾವುಗಳು ದಿನನಿತ್ಯ ಆಚರಿಸಿಕೊಳ್ಳುತ್ತಿದ್ದೇವೆ. ಹೆಣ್ಣು ಮಕ್ಕಳನ್ನು ಗೌರವಿಸಿ ಅವರನ್ನು ಗುರುತಿಸಿದರೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಒಂದು ಅರ್ಥ ಬರುತ್ತದೆ ಎಂದು ಹೇಳಿದರು.
ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಕುಸುಮಾ ಮಾತನಾಡಿ, ಪ್ರಾಚೀನ ಕಾಲದಿಂದಲೂ ಹೆಣ್ಣನ್ನು ನಮ್ಮ ಸಮಾಜದಲ್ಲಿ ದೇವತೆಯ ರೂಪದಲ್ಲಿ ಕಾಣುತ್ತಾರೆ. ಹೆಣ್ಣು ಮಕ್ಕಳು ತನ್ನ ಕುಟುಂಬದ ಎಲ್ಲ ಜವಾಬ್ದಾರಿ ನಿಭಾಯಿಸುವ ಶಕ್ತಿ ಹೊಂದಿರುತ್ತಾರೆ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗದೆ ನಿತ್ಯ ಆಚರಿಸುವಂತೆ ಆಗಬೇಕು. ಹೆಣ್ಣು ಪ್ರತಿಯೊಂದು ರಂಗದಲ್ಲಿಯೂ ತನ್ನದೇ ಆದ ಘನತೆ, ಹಿರಿಮೆ ಗರಿಮೆಯನ್ನು, ಕುಟುಂಬದ ಗೌರವವನ್ನು ಕಾಪಾಡಿಕೊಂಡು ಹೋಗುವ ಮಹಾನ್ ಶಕ್ತಿ. ಹಲವು ಯುದ್ಧಗಳಲ್ಲಿ ದೇಶದ ರಕ್ಷಣೆ ಮಾಡುವಲ್ಲಿಯೂ ಮಹಿಳೆಯರ ಪಾತ್ರ ಅನನ್ಯವಾಗಿದೆ. ವಿಮಾನ ಚಾಲಿಸುವುದರಿಂದ ಹಿಡಿದು ಅಂತರಿಕ್ಷದವರಿಗೂ ಅವಳದೇ ಆದ ಬಹುದೊಡ್ಡ ಚಾಪು ಮೂಡಿಸಿದ್ದಾಳೆ. ಹೆಣ್ಣು ಕುಟುಂಬದ ಕಣ್ಣು. ಜವಾಬ್ದಾರಿ ಜತೆಗೆ ಹಲವು ಉನ್ನತ ಹುದ್ದೆಗಳನ್ನು ಗಿಟ್ಟಿಸಿಕೊಂಡು ಪುರುಷರಿಗೆ ಸಮಾನವಾಗಿ ದುಡಿಯುವ ಅವಕಾಶವನ್ನು ಕಲ್ಪಿಸಿಕೊಂಡಿದ್ದಾಳೆ ಎಂತಹ ಸಂದರ್ಭದಲ್ಲಿಯೂ ಮಹಿಳೆಯರು ತಮ್ಮ ವಿಶ್ವಾಸವನ್ನು ಕಳೆದುಕೊಳ್ಳಬಾರದು ಎಂದರು.
ವಕೀಲೆ ಜಿ.ಶ್ವೇತಾ ಅವರು ಪ್ರಾಸ್ತವಿಕ ನುಡಿಗಳನ್ನಾಡಿದರು. ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಚೇತನ, ವಕೀಲರ ಸಂಘದ ಅಧ್ಯಕ್ಷ ಶಿವಕುಮಾರ್, ಸರ್ಕಾರಿ ಅಭಿಯೋಜಕರಾದ ಸುನೀಲ್‌ಕುಮಾರ್, ಶಿವಕುಮಾರ್, ವಕೀಲ ಕೃಷ್ಣಮೂರ್ತಿ ಇದ್ದರು. ಹಿರಿಯ ವಕೀಲರು, ವಕೀಲರ ಸಂಘದ ಪದಾಧಿಕಾರಿಗಳು ಇದ್ದರು.