

ಹಿರಿಯೂರು: ಸಂವಿಧಾನ ಪೀಠಿಕೆ ಓದುವುದು ಪ್ರಸ್ತುತ ಹೆಚ್ಚು ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಸೆ.15ರಂದು ಆಯೋಜಿಸಿರುವ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಆಚರಣೆಯಲ್ಲಿ ಸರ್ವರೂ ಪಾಲ್ಗೊಳ್ಳಬೇಕು ಎಂದು ತಹಸೀಲ್ದಾರ್ ಸಿ.ರಾಜೇಶ್ ಕುಮಾರ್ ತಿಳಿಸಿದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸಂವಿಧಾನದ ಮಹತ್ವ ಮತ್ತು ಆಶಯಗಳ ಅರಿವು ಮೂಡಿಸಲು ಇದೊಂದು ಮಹತ್ವ ಪೂರ್ಣ ಕಾರ್ಯಕ್ರಮ ಎಂದರು.
ನಾಗರಿಕ ಶಿಕ್ಷಣ, ದೇಶಭಕ್ತಿ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳ ಬಗ್ಗೆ ತಿಳಿಸಲು ಹಾಗೂ ಉತ್ತಮ ಜವಾಬ್ದಾರಿಯುತ ನಾಗರಿಕರನ್ನಾಗಿ ತಯಾರಿಸಲು ಸಹಾಯಕವಾಗಿದೆ. ಆದ್ದರಿಂದ ಎಲ್ಲ ಇಲಾಖೆಗಳು ಸಹಕಾರ ನೀಡುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಸೂಚಿಸಿದರು.
ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ದಿನೇಶ್ ಮಾತನಾಡಿ, ಇದೊಂದು ಆನ್ಲೈನ್ ಕಾರ್ಯಕ್ರಮ. ತಾಲೂಕಿನ ಪ್ರತಿಯೊಂದು ಇಲಾಖೆಗಳು, ಶಾಲಾ-ಕಾಲೇಜುಗಳು, ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಸೆ.12ರೊಳಗೆ ಇಲಾಖೆಯ ನಿಗದಿತ ಲಿಂಕ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಸೆ.15ರ ಬೆಳಗ್ಗೆ 10ಕ್ಕೆ ಸಂವಿಧಾನದ ಪೀಠಿಕೆ ಓದುವ ಮೂಲಕ ವಿಡಿಯೋ ಹಾಗೂ ಭಾವಚಿತ್ರವನ್ನು ಅಪ್‌ಲೋಡ್ ಮಾಡಬೇಕು. ಅದರ ಆಧಾರದ ಮೇಲೆ ಭಾಗವಹಿಸಿಕೆ ಪ್ರಮಾಣ ಪತ್ರ ಪಡೆಯಬಹುದು ಎಂದರು.
ಬಿಸಿಎಂ ಇಲಾಖೆ ಅಧಿಕಾರಿ ಚಿತ್ರಲಿಂಗಪ್ಪ, ತೋಟಗಾರಿಕೆ ಸ.ನಿರ್ದೇಶಕ ಲೋಕೇಶ್, ಪ್ರಾಚಾರ್ಯ ಡಾ.ಮಹೇಶ್, ಡಾ.ಚಂದ್ರಶೇಖರ್, ಕಾರ್ಮಿಕ ಇಲಾಖೆ ನಿರೀಕ್ಷ ಅಲ್ಲಾಭಕ್ಷಿ ಇತರರಿದ್ದರು.