

ಗೋಣಿಕೊಪ್ಪಲು: ಕೃಷಿ ಕಾರ್ಯಕ್ರಮದಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ ಟ್ರಸ್ಟ್ ವತಿಯಿಂದ ಗೋಣಿಕೊಪ್ಪ ವಲಯದ ಮಾಯಮುಡಿ ಕಾರ್ಯಕ್ಷೇತ್ರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಜಾಗೃತಿ ಮಾಹಿತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ವಲಯ ಅರಣ್ಯಾಧಿಕಾರಿ ಸಚಿನ್ ಮಾತನಾಡಿ, ಗಿಡಗಳನ್ನು ನೆಡುವುದರ ಜತೆಗೆ ಅವುಗಳನ್ನು ಪೋಷಣೆ ಮಾಡಬೇಕು. ಪರಿಸರ ಸಂರಕ್ಷಣೆಯಿಂದ ಶುದ್ಧವಾದ ಗಾಳಿ, ನೀರು ಸಿಗುತ್ತದೆ ಎಂದು ಮಾಹಿತಿ ನೀಡಿದರು.
ವಿದ್ಯಾರ್ಥಿಗಳಿಗೆ ಪರಿಸರ ಕುರಿತು ಪ್ರಬಂಧ ಹಾಗೂ ಚಿತ್ರಕಲೆ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಉಮೇಶ್, ಕೃಷಿ ಮೇಲ್ವಿಚಾರಕ ವಸಂತ್, ಶಾಲಾ ಮುಖ್ಯ ಶಿಕ್ಷಕಿ ಜಯಮ್ಮ, ಮೀನಾಕ್ಷಿ ವೇದಿಕೆಯಲ್ಲಿದ್ದರು. ಶಾಲೆಯ ಸಹ ಶಿಕ್ಷಕಿ ಸಹನಾ ಪರಿಸರದ ಬಗ್ಗೆ ಮಾಹಿತಿ ನೀಡಿದರು. ಒಕ್ಕೂಟದ ಪದಾಧಿಕಾರಿಗಳಾದ ಬಿಂದು, ಮೇರಿ, ಶಶಿ, ಸೇವಾ ಪ್ರತಿನಿಧಿ ಪುಷ್ಪಾ ಇತರರಿದ್ದರು.
ಶಾಲಾ ಆವರಣದಲ್ಲಿ ವಿವಿಧ ರೀತಿಯ ಹಣ್ಣಿನ ಗಿಡಗಳನ್ನು ನಾಟಿ ಮಾಡಲಾಯಿತು. ಶಾಲಾ ಶಿಕ್ಷಕರಾದ ರಾಗಿಣಿ ಡಿ.ಯು. ಸತ್ಯ ಎಂ.ಟಿ, ಲೀಲಾ ಎಂ.ಕೆ, ಸುಮಾ, ಪುಷ್ಪಾ, ಲಾವಣ್ಯ ಇದ್ದರು.