ಸವಲತ್ತು ಪಡೆಯಲು ಸಂಘಟಿತರಾಗುವುದು ಅವಶ್ಯಕ

ಹನೂರಿನಲ್ಲಿ ರೈತ ಸಂಘದ (ಹಸಿರು ಸೇನೆ) ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌಡಳ್ಳಿ ಸೋಮಣ್ಣ, ಮಹದೇವ ಪ್ರಭುಸ್ವಾಮಿ, ಚಿಕ್ಕರಾಜು, ಪವನ್, ಬಸವರಾಜು ಇತರರು ಇದ್ದರು.
ಹನೂರಿನಲ್ಲಿ ರೈತ ಸಂಘದ (ಹಸಿರು ಸೇನೆ) ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌಡಳ್ಳಿ ಸೋಮಣ್ಣ, ಮಹದೇವ ಪ್ರಭುಸ್ವಾಮಿ, ಚಿಕ್ಕರಾಜು, ಪವನ್, ಬಸವರಾಜು ಇತರರು ಇದ್ದರು.
Published on

ಹನೂರು: ಸರ್ಕಾರದಿಂದ ಸಿಗುವ ಸವಲತುಗಳನ್ನು ಸಮರ್ಪಕವಾಗಿ ಪಡೆಯುವುದರೊಂದಿಗೆ ಸಮಸ್ಯೆ ಬಗೆಹರಿಸಿಕೊಳ್ಳಬೇಕಾದರೆ ಪ್ರತಿಯೊ ಬ್ಬರೂ ಸಂಘಟಿತರಾಗಬೇಕು ಎಂದು ರೈತ ಸಂಘದ(ಹಸಿರು ಸೇನೆ) ಜಿಲ್ಲಾಧ್ಯಕ್ಷ ಗೌಡಳ್ಳಿ ಸೋಮಣ್ಣ ಹೇಳಿದರು.

ಪಟ್ಟಣದ ಲೋಕೋಪಯೋಗಿ ಇಲಾಖೆ ಅತಿಥಿಗೃಹದ ಸಭಾಂಗಣದಲ್ಲಿ ಸೋಮವಾರ ಸಂಘದ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ ಬಳಿಕ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.

ಹನೂರು ಭಾಗದಲ್ಲಿ ಹೆಚ್ಚಿನ ರೈತರು ಕೃಷಿ ಮಾಡುತ್ತಿದ್ದಾರೆ. ಆದರೆ ಸರ್ಕಾರದಿಂದ ಸಿಗುವ ಸವಲತ್ತುಗಳು ಸಮರ್ಪಕವಾಗಿ ಸಿಗುತ್ತಿಲ್ಲ. ಜತೆಗೆ ರೈತರು ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ಇದರಿಂದ ಕೃಷಿಯಲ್ಲಿ ಹಿನ್ನಡೆ ಸಾಧಿಸುವಂತಾಗಿದೆ. ಇತ್ತ ಕಾಡು ಪ್ರಾಣಿಗಳು ಜಮೀನಿಗೆ ಲಗ್ಗೆ ಇಟ್ಟು ಫಸಲನ್ನು ನಾಶಪಡಿಸುತ್ತಿದ್ದು, ನಷ್ಟ ಅನುಭವಿಸುವಂತಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕ್ರಮಕೈಗೊಳ್ಳುವಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇದರಿಂದ ರೈತರು ತೊಂದರೆ ಪಡುವಂತಾಗಿದೆ. ಸಂಘಟನೆ ಕೊರತೆಯಿಂದ ರೈತರು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಈ ಬಗ್ಗೆ ಪ್ರತಿಯೊಬ್ಬರೂ ಮನದಟ್ಟು ಮಾಡಿಕೊಂಡು ಒಗ್ಗಟ್ಟಿನಿಂದ ಸಂಘಟಿತರಾಗಬೇಕು. ಜತೆಗೆ ಪ್ರಶ್ನಿಸುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಸಂಘದ ತಾಲೂಕು ಅಧ್ಯಕ್ಷ ಮಲ್ಲಯ್ಯನಪುರ ಚಿಕ್ಕರಾಜು ಮಾತನಾಡಿ, ಹನೂರು ಭಾಗದ ಬಹುತೇಕ ಗ್ರಾಮಗಳಲ್ಲಿ ಮೂಲ ಸೌಕರ್ಯಗಳ ಕೊರೆತೆಯಿದೆ. ಈ ನಡುವೆ ರೈತರು ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಪಡೆದುಕೊಳ್ಳಲು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ಪ್ರತಿಯೊಬ್ಬರೂ ಸಂಘಟಿತರಾಗಬೇಕಿರುವುದು ಅನಿವಾರ್ಯ ಎಂದರು.

ಪದಾಧಿಕಾರಿಗಳ ಆಯ್ಕೆ : ಜಿಲ್ಲಾಧ್ಯಕ್ಷ ಗೌಡಳ್ಳಿ ಸೋಮಣ್ಣ ಅಧ್ಯಕ್ಷತೆಯಲ್ಲಿ ನಡೆದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಗೌರವಾಧ್ಯಕ್ಷರಾಗಿ ಗುಳ್ಯ ಪುಟ್ಟಸ್ವಾಮಿ, ಅಧ್ಯಕ್ಷರಾಗಿ ಮಲ್ಲಯ್ಯನಪುರ ಚಿಕ್ಕರಾಜು, ಪ್ರಧಾನ ಕಾರ್ಯದರ್ಶಿಯಾಗಿ ಪಿ.ಜಿ.ಪಾಳ್ಯ ಮಹದೇವ ಪ್ರಭುಸ್ವಾಮಿ, ಉಪಾಧ್ಯಕ್ಷರಾಗಿ ಕಾಮಗೆರೆ ಮಲ್ಲಿಕಾರ್ಜುನಸ್ವಾಮಿ, ಕಾರ್ಯದರ್ಶಿಯಾಗಿ ಕಾಮಗೆರೆ ಸುಂದ್ರಪ್ಪ, ಸಂಘಟನಾ ಕಾರ್ಯದರ್ಶಿಯಾಗಿ ಗುಳ್ಯ ಮಂಟೇಸ್ವಾಮಿ, ಸಹ ಕಾರ್ಯದರ್ಶಿ ನಾಗಮಾದು ಹಾಗೂ ರಂಗಸ್ವಾಮಿ ಅವರನ್ನು ಆಯ್ಕೆ ಮಾಡಲಾಯಿತು.

ಜಿಲ್ಲಾ ಸಂಘದ ಕಾರ್ಯದರ್ಶಿ ಪಿ.ಜಿ.ಪಾಳ್ಯ ಪವನ್, ಪ್ರಧಾನ ಕಾರ್ಯದರ್ಶಿ ಕಾಮಗೆರೆ ಬಸವರಾಜು, ಮುಖಂಡರಾದ ಶಾಂತಮೂರ್ತಿ, ಪ್ರಭುಸ್ವಾಮಿ, ಹಲಗಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net