ಪರಿಸರ ಸಮತೋಲನ ಕಾಪಾಡುವುದು ಅಗತ್ಯ

Web 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಪರಿಸರದ ಸಮತೋಲನ ಕಾಪಾಡಿಕೊಂಡು ಒಲಿಸಿ ಬಳಸುವ ಮನೋಭಾವ ಮರೆಯಾಗಿ, ಬಗ್ಗು ಬಡಿದು ಶೋಷಿಸುವ ಇಂದಿನ ಪ್ರವೃತ್ತಿ ತೀವ್ರ ಆಘಾತಕಾರಿಯಾಗಿದೆ ಎಂದು ಪತ್ರಕರ್ತ ಹರ್ಷವರ್ಧನ ಶೀಲವಂತ ಕಳವಳ ವ್ಯಕ್ತಪಡಿಸಿದರು.
ಧಾರವಾಡದ ಸಾಹಿತ್ಯಿಕ ಸಂಘಟನೆಯ ಅನ್ವೇಷಣಕೂಟವು ಇಲ್ಲಿನ ಸಾಧನಕೇರಿಯ ಚೈತ್ರದ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಉಪನ್ಯಾಸ ಮಾಲಿಕೆಯಲ್ಲಿ ‘ಈ ಸೃಷ್ಟಿಯೋರ್ವ ಅದ್ಭುತ ಶಿಕ್ಷಕ’ ಕುರಿತು ಅವರು ಮಾತನಾಡಿದರು.
ನಾಗರಿಕ ಸಮಾಜದ ತಿಳಿವಳಿಕೆ ಹಾಗೂ ಅನಾಗರಿಕ ನಡುವಳಿಕೆಗಳ ಮಧ್ಯದ ಅಗಾಧ ಕಂದರವನ್ನು ತಕ್ಷಣ ಬೆಸೆಯಬೇಕಿದೆ. ಸಹಜೀವನ ನಡೆಸುವ ಈ ಸೃಷ್ಟಿಯ ಇತರ ಜೀವಿಗಳ ಬಗ್ಗೆ ಸಹಾನುಭೂತಿ ಹೊಂದಿ ತಾಳಿಕೆ ಮತ್ತು ಬಾಳಿಕೆ ಬರುವ ಅಭಿವೃದ್ಧಿ ಮಾದರಿಗಳನ್ನು ಬೇಗನೇ ಸೃಷ್ಟಿಸಬೇಕು ಎಂದು ಹೇಳಿದ ಅವರು, ಸುತ್ತಲಿನ ಸೃಷ್ಟಿಯ ಪ್ರಾಣಿ, ಪಕ್ಷಿ, ಕೀಟಗಳಾದಿಯಾಗಿ ಹತ್ತಾರು ಬಗೆಯ ಆಗು-ಹೋಗುಗಳ ಉದಾಹರಣೆಗಳೊಂದಿಗೆ ವಿಷಯ ಮಂಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಡಾ. ಪ್ರಕಾಶ ಭಟ್ಟ ಮಾತನಾಡಿ, ಮನುಷ್ಯ ತನ್ನ ‘ಇಂಗಾಲದ ಹೆಜ್ಜೆ’ ಮಿತಿಗೊಳಿಸುವ ಎಲ್ಲ ಬಗೆಯ ಕ್ರಮಕೈಗೊಳ್ಳುವ ಮನಸ್ಸು ಮಾಡಬೇಕು. ಜಾಗತಿಕ ತಾಪಮಾನ ಏರಿಕೆಗೆ ಮನುಷ್ಯರ ಕೊಡುಗೆ ಸಾಕಷ್ಟಿದೆ. ಪರಿಸರ ಸ್ನೇಹಿ, ಸರಳ ರೀತಿ ಬದುಕುವ ಕಲೆಯನ್ನು ಎಲ್ಲರೂ ಕರಗತ ಮಾಡಿಕೊಳ್ಳಬೇಕು ಎಂದರು.
ನಂತರ ಸಂವಾದ ನಡೆಯಿತು. ಅನ್ವೇಷಣ ಕೂಟದ ಅಧ್ಯಕ್ಷ ನರಸಿಂಹ ಪರಾಂಜಪೆ, ಡಾ. ಹ.ವೆಂ. ಕಾಖಂಡಿಕಿ, ಅನಂತ ಥಿಟೆ, ಡಾ. ರುದ್ರಣ್ಣ ಚಿಲುಮಿ, ಡಾ. ಸಂಜೀವ ಕುಲಕರ್ಣಿ, ರಾಮಚಂದ್ರ ಧೋಂಗಡೆ, ಎಂ.ಬಿ. ಸದಾನಂದ, ಎ.ಡಿ. ಸಿದ್ಧೇಶ್ವರ, ಶ್ರೀಪಾದ ನಾಡಗೀರ, ಡಿ.ವಿ. ಕುಲಕರ್ಣಿ, ಹಿರಿಯ ಚಿತ್ರಕಲಾವಿದ ಎಂ.ಆರ್. ಬಾಳಿಕಾಯಿ, ಶ್ರೀಧರ ಗಾಂವಕರ, ಬಿ.ಐ. ಈಳಿಗೇರ, ಮಲ್ಲಿಕಾರ್ಜುನ ಚಿಕ್ಕಮಠ, ಕೆ.ಎಸ್.ಘಾಣೇಕರ, ವಸುಂಧರಾ ದೇಶಪಾಂಡೆ, ಬನೂ ದೀಕ್ಷಿತ, ಪ್ರತಿಭಾ ಕುಲಕರ್ಣಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net