ಸಹಕಾರ ವಿಷಯ ಪಠ್ಯದಲ್ಲಿ ಅಳವಡಿಸುವುದು ಅಗತ್ಯ

mys
Published on

ಮೈಸೂರು: ರಾಜ್ಯದಲ್ಲಿ ಸಹಕಾರ ಕ್ಷೇತ್ರದ ಬೆಳವಣಿಗೆಗೆ ಸಹಕಾರ ವಿಷಯವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದಲ್ಲಿ ಅಳವಡಿಸುವ ಅವಶ್ಯಕತೆ ಇದೆ ಎಂದು ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕೋ ಆಪರೇಟಿವ್ ಮ್ಯಾನೇಜ್‌ಮೆಂಟ್ ಪ್ರಾಧ್ಯಾಪಕ ಮಹದೇವಪ್ಪ ಅಭಿಪ್ರಾಯಪಟ್ಟರು.

ಮೈಸೂರು ವಿಶ್ವ ವಿದ್ಯಾಲಯದ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯ, ರಾಜ್ಯ ಸಹಕಾರ ಮಹಾಮಂಡಳ ನಿಯಮಿತ ವತಿಯಿಂದ ಮಾನಸಗಂಗೋತ್ರಿಯ ಇಎಂಆರ್‌ಸಿ ಸಭಾಂಗಣದಲ್ಲಿ ಬುಧವಾರ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸಹಕಾರ ವಿಷಯದಲ್ಲಿ ಹಮ್ಮಿಕೊಂಡಿದ್ದ ಚರ್ಚಾ ಸ್ಪರ್ಧೆಯಲ್ಲಿ ಮಾತನಾಡಿದರು.

ದೇಶದಲ್ಲಿ 8.5 ಲಕ್ಷ ಸಹಕಾರ ಸಂಸ್ಥೆಗಳು ಇದ್ದು, 32 ಕೋಟಿ ಜನರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕಾರ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅದೇ ರೀತಿ ರಾಜ್ಯದಲ್ಲಿ 47 ಸಾವಿರ ಸಹಕಾರ ಸಂಸ್ಥೆಗಳು ಇದ್ದು, 2.65 ಕೋಟಿ ಜನರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸಂಖ್ಯೆಯನ್ನು ಮತ್ತಷ್ಟು ವೃದ್ಧಿಸಲು ಮಕ್ಕಳಲ್ಲಿ ಸಹಕಾರ ಕ್ಷೇತ್ರದ ಕುರಿತು ಅರಿವು ಮೂಡಿಸುವ ಅವಶ್ಯಕತೆ ಇದೆ ಎಂದರು.

ಈ ಹಿಂದೆ ಖಾಸಗಿ ಹಾಗೂ ಸಾರ್ವಜನಿಕ ವ್ಯವಸ್ಥೆ ಮಾತ್ರ ಇತ್ತು. ಈ ಎರಡು ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ಸಹಕಾರ ಕ್ಷೇತ್ರದ ಉದಯಕ್ಕೆ ಕಾರಣವಾಯಿತು. ಈ ಸಹಕಾರ ಕ್ಷೇತ್ರ ಮತ್ತಷ್ಟು ಬೆಳವಣಿಗೆ ಹೊಂದಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಹೊಸದಾಗಿ ಸಹಕಾರ ಸಚಿವಾಲಯವನ್ನು ಸೃಷ್ಟಿಸಿದೆ ಎಂದು ಹೇಳಿದರು.

ಮೈಸೂರು ವಿಶ್ವ ವಿದ್ಯಾಲಯ ಕುಲಸಚಿವೆ ವಿ.ಆರ್. ಶೈಲಜಾ ಮಾತನಾಡಿ, ದೇಶದ ಆರ್ಥಿಕ ಬೆಳವಣಿಗೆಗೆ ಸಹಕಾರ ಕ್ಷೇತ್ರ ತನ್ನದೇ ಆದ ಕೊಡುಗೆ ನೀಡಿದೆ. ಸಹಕಾರ ಕ್ಷೇತ್ರವು ಜಿಡಿಪಿ ಬೆಳವಣಿಗೆಗೆ ಶೇ.12 ರಷ್ಟು ಕೊಡುಗೆ ನೀಡಿದೆ. ಸಹಕಾರ ಕ್ಷೇತ್ರದಲ್ಲಿ ನಡೆಯುತ್ತಿರುವ ದುರುಪಯೋಗ ತಡೆದು ಉತ್ತಮ ಆಡಳಿತ ನೀಡಿದರೆ ಸಹಕಾರ ಕ್ಷೇತ್ರ ಬೆಳವಣಿಗೆ ಹೊಂದಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮ ಉದ್ಘಾಟಿಸಿದ ನಿವೃತ್ತ ಪ್ರಾಧ್ಯಾಪಕ ಪ್ರೊ.ಎನ್. ಮಹೇಂದ್ರ ಕುಮಾರ್ ಮಾತನಾಡಿ, ಜಗತ್ತು ಸ್ಪರ್ಧಾತ್ಮಕವಾಗಿದ್ದು, ಇದಕ್ಕೆ ಪೂರಕವಾಗಿ ಸಹಕಾರ ಸಂಘಗಳು ಅಭಿವೃದ್ಧಿ ಕಾಣುವ ಅವಶ್ಯಕತೆ ಇದೆ. ಇದಕೋಸ್ಕರ ಸಹಕಾರ ಸಂಘಗಳನ್ನು ಸದೃಢವಾಗಿ ಕಟ್ಟುವ ಕಾರ್ಯ ಆಗಬೇಕು ಎಂದರು. ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ನಿರ್ದೇಶಕಿ ಡಾ.ಎಸ್.ಎನ್. ಸುಷ್ಮಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net