

ಮಹಾಲಿಂಗಪುರ: ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ಉತ್ತಮ ಸಂಸ್ಕೃತಿ ಮತ್ತು ಸಂಸ್ಕಾರ ನೀಡುವದು ಅಗತ್ಯವಾಗಿದೆ ಎಂದು ನಿವೃತ್ತ ಪ್ರಾಚಾರ್ಯ, ಶಿಕ್ಷಣ ರತ್ನ ಪ್ರಶಸ್ತಿ ಪುರಸ್ಕೃತ ಎಸ್.ಎಂ. ಉಳ್ಳೇಗಡ್ಡಿ ಹೇಳಿದರು.
ಡಾ.ಎಸ್.ರಾಧಾಕೃಷ್ಣ ಪ್ರಾಥಮಿಕ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ 7ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ, ಬಹುಮಾನ ವಿತರಣೆ ಮತ್ತು ವಿಜ್ಞಾನ ವಸ್ತು ಪ್ರದರ್ಶನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಡಾ.ಎಸ್.ರಾಧಾಕೃಷ್ಣ ಶಾಲೆಯ ಶಿಕ್ಷಕಿಯರು ಬಹಳಷ್ಟು ಶ್ರಮವಹಿಸಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿರುವದು ಶ್ಲಾಘನೀಯ ಎಂದರು.
ಕೆಜಿಎಸ್ ವಲಯದ ಸಿಆರ್‌ಪಿ ಎ.ಎಂ. ಮಂಚದ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ಇಲ್ಲಿನ ಮುಸ್ಲಿಂ ವಿದ್ಯಾರ್ಥಿಗಳು ಸಹ ಗೀತೆಯ ಶ್ಲೋಕ ಹೇಳುವ ಮೂಲಕ ಭಾವೈಕ್ಯತೆ ಸಾರುತ್ತಿದ್ದಾರೆ. ಪ್ರತಿಭಾ ಕಾರಂಜಿಯಲ್ಲಿ ಅತಿಹೆಚ್ಚು ಪ್ರಥಮ, ದ್ವಿತೀಯ ಬಹುಮಾನ ಪಡೆಯುತ್ತಿರುವದು ಶಾಲೆಯ ಉತ್ತಮ ಗುಣಮಟ್ಟದ ಬೋಧನೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು.
ಬಸವಾನಂದ ಪ್ರೌಢಶಾಲೆಯ ಮುಖ್ಯಗುರು ಸಿದ್ಧಾರೂಢ ಮೂಗಳಖೋಡ, ಚಂದ್ರಶೇಖರ ಮೋರೆ ಮಾತನಾಡಿದರು.
ಮಕ್ಕಳಿಂದ ವಿಜ್ಞಾನ ವಸ್ತುಪ್ರದರ್ಶನ, ರಂಗೋಲಿ ಸ್ಪರ್ಧೆ, ಕಿರುನಾಟಕ, ರೈತಗೀತೆ, ಭರತನಾಟ್ಯ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು. ಕಲಾವಿದ ಚಂದ್ರಕಾಂತ ಸುತಾರ ಹಾಗೂ ಅತಿಥಿಗಳನ್ನು ಸನ್ಮಾನಿಸಲಾಯಿತು.
ಆಡಳಿತ ಮಂಡಳಿಯ ಅಧ್ಯಕ್ಷೆ ಎಂ.ಎಸ್. ಉಳ್ಳೇಗಡ್ಡಿ ಸಮಾರಂಭ ಉದ್ಘಾಟಿಸಿದರು. ಸಲಹಾ ಸಮಿತಿ ಅಧ್ಯಕ್ಷ ಮಹಾಲಿಂಗ ಗೋಕಾಂವಿ, ಸಂಸ್ಥೆಯ ನಿರ್ದೇಶಕ ದೇವರೇಶ ಉಳ್ಳಾಗಡ್ಡಿ, ಮುಖ್ಯಶಿಕ್ಷಕಿ ಮಹಾನಂದಾ ಮೂಸಿ ಮತ್ತಿತರರಿದ್ದರು.