ಹಿಂದಿನ ಆಹಾರ ಪದ್ಧತಿ ರೂಢಿಸಿಕೊಳ್ಳುವುದು ಅಗತ್ಯ

14
Published on

ಮೈಸೂರು: ಪ್ರಸ್ತುತ ಮಾನವನ ಜೀವನ ಧಾವಂತದಿಂದ ಕೂಡಿದೆ. ಆಹಾರ ಶೈಲಿ ಬದಲಾಗಿ, ಒತ್ತಡದ ಬದುಕು ನಮ್ಮನ್ನು ಆವರಿಸಿಕೊಂಡಿದೆ. ಹಾಗಾಗಿ ನಮ್ಮ ಹಿಂದಿನ ಆಹಾರ ಪದ್ಧತಿಯನ್ನು ನಾವೆಲ್ಲ ಮತ್ತೆ ರೂಢಿಸಿಕೊಳ್ಳಬೇಕಿದೆ ಎಂದು ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಜೈವಿಕ ತಂತ್ರಜ್ಞಾನ ಸಂಶೋಧನಾ ಪ್ರಾಧ್ಯಾಪಕ ಪ್ರೊ.ಟಿ.ಪಿ.ಸಿಂಗ್ ಅಭಿಪ್ರಾಯಪಟ್ಟರು.


ಮೈಸೂರು ವಿಶ್ವವಿದ್ಯಾಲಯದ ವತಿಯಿಂದ ಕ್ರಾರ್ಡ್ ಹಾಲ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ‘ಸೂಕ್ಷ್ಮಜೀವಿ ಸೋಂಕುಗಳ ವಿರುದ್ಧ ಸಹಜ ರೋಗ ನಿರೋಧಕ ಪ್ರೋಟಿನ್‌ಗಳ ಚಿಕಿತ್ಸಾ ಅನ್ವಯಿಕತೆ’ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು.
ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾದರೆ ವೈರಸ್, ಬಾಕ್ಟೀರಿಯಾದಿಂದ ಪಾರಾಗಬಹುದು. ನಮ್ಮ ದೇಹದಲ್ಲಿ ಪ್ರೋಟಿನ್ ಹೆಚ್ಚು ಮಾಡಿಕೊಂಡರೆ ಆ್ಯಂಟಿಬಯಾಟಿಕ್ ಅವಶ್ಯಕತೆಯೇ ಇರುವುದಿಲ್ಲ ಎಂದರು.
ಭಾರತ ವಿಜ್ಞಾನ ಕ್ಷೇತ್ರದಲ್ಲಿ ಹೆಚ್ಚು ಬೆಳೆಯುತ್ತಿದೆ. ಮಾರ್ಸ್‌ಗೂ ಸ್ಯಾಟಲೈಟ್ ಕಳುಹಿಸಿದೆ. ಕರೊನಾವನ್ನು ಭಾರತ ದೇಶ ಸಮರ್ಥವಾಗಿ ಹಿಮ್ಮೆಟ್ಟಿಸಿತು. ಭಾರತದ ವಿಜ್ಞಾನಿಗಳೇ ಲಸಿಕೆ ಕಂಡು ಹಿಡಿದರು. ಇತರ ದೇಶಗಳಿಗೂ ಭಾರತ ಲಸಿಕೆ ಹಂಚಿತು. ಆ್ಯಂಟಿ ಬಯಟಿಕ್ ಬಳಸಿದರೆ

ತಾತ್ಕಾಲಿಕ ಉಪಶಮನ ಸಿಗಬಹುದು. ಆದರೆ, ರೋಗನಿರೋಧಕ ಶಕ್ತಿ ಹೆಚ್ಚಿಸಿದರೆ ಇದರ ಅವಶ್ಯಕತೆಯೇ ಇರುವುದಿಲ್ಲ ಎಂದರು.
ವಿಶ್ರಾಂತ ಕುಲಪತಿ ಪ್ರೊ.ಎಸ್.ಎನ್.ಹೆಗ್ಡೆ ಮಾತನಾಡಿ, ವಿಶೇಷ ದಿನಗಳು ಕೇವಲ ಆಚರಣೆಗಷ್ಟೇ ಸೀಮಿತವಾಗಬಾರದು. ಬದಲಿಗೆ ಆ ದಿನಗಳ ನಿಜವಾದ ಆಶಯ ಸಾಕಾರಗೊಳ್ಳಬೇಕು. ಇಂದು ವಿಜ್ಞಾನದ ಮೂಲಕ ನಾನಾ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ. ಶೂನ್ಯವನ್ನು ಕಂಡು ಹಿಡಿದಿದ್ದೆ ಭಾರತೀಯ ಗಣಿತ ತಜ್ಞರು. ಯುವ ವಿಜ್ಞಾನಿಗಳು ಬರೀ ಓದುತ್ತಾ ಕೂರದೆ ಹೊಸ ಹೊಸ ಸಂಶೋಧನೆಯನ್ನು ಮಾಡಬೇಕು. ಬದ್ಧತೆ ಇರುವವರು ಈ ಕ್ಷೇತ್ರಕ್ಕೆ ಬರಬೇಕು. ಭಾರತವಿಂದು ಸುಸ್ಥಿರ ಅಭಿವೃದ್ಧಿ ಬಗ್ಗೆ ಯೋಚಿಸಬೇಕು ಎಂದು ಆಶಿಸಿದರು.
ಶಿಕ್ಷಣ ಹೆಚ್ಚು ಅನುದಾನ ವಿನಿಯೋಗ ಆಗುತ್ತಿಲ್ಲ. ಜಪಾನ್, ಚೀನಾ, ದಕ್ಷಿಣ ಕೊರಿಯಾ, ಸಿಂಗಾಪುರ ಉನ್ನತ ಶಿಕ್ಷಣಕ್ಕಾಗಿ ಹೆಚ್ಚು ಹಣ ವಿನಿಯೋಗಿಸುತ್ತಿದೆ. ಆದರೆ, ಭಾರತ ತನ್ನ ಜಿಡಿಪಿಯಲ್ಲಿ ಕೇವಲ ಶೇ.1 ರಷ್ಟು ಹಣ ಮಾತ್ರ ಶಿಕ್ಷಣಕ್ಕೆ ವಿನಿಯೋಗಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ವಿಜ್ಞಾನ -ತಂತ್ರಜ್ಞಾನ ನಿಕಾಯದ ಡೀನ್ ಪ್ರೊ.ಎಚ್.ಟಿ. ಬಸವರಾಜಪ್ಪ ಮಾತನಾಡಿ, ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಪ್ರಯುಕ್ತ ಪ್ರಬಂಧ ಸ್ಪರ್ಧೆ, ವಿಚಾರ ಸಂಕಿರಣ, ಉಪನ್ಯಾಸ, ಕ್ವಿಜ್ ಸೇರಿದಂತೆ ಇತರೆ ಕಾರ್ಯಕ್ರಮ ನಡೆಸುವ ಮೂಲಕ ವಿಜ್ಞಾನ ದಿನದ ಪ್ರಾಮುಖ್ಯತೆಯನ್ನು ಯುವ ಸಮೂಹಕ್ಕೆ ತಿಳಿಸಿಕೊಡಬೇಕಿದೆ. ಜಾಗತಿಕ ತಾಪಮಾನ, ಹಸಿರು ಮನೆ ಪರಿಣಾಮ ಜಗತ್ತನ್ನು ಇಂದು ಕಾಡುತ್ತಿದೆ. ವಿಜ್ಞಾನ ಇಂತಹ ಸಮಸ್ಯೆಗಳಿಗೆ ಪರಿಹಾರ ನೀಡುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಕುಲಪತಿ ಪ್ರೊ.ಮುಜಾರ್ ಎಚ್. ಅಸ್ಸಾದಿ, ಕುಲಸಚಿವೆ ವಿ.ಆರ್. ಶೈಲಜಾ, ಪರೀಕ್ಷಾಂಗ ಕುಲಸಚಿವ ಪ್ರೊ.ಎ.ಪಿ.ಜ್ಞಾನಪ್ರಕಾಶ್, ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net