ರಕ್ಷಿತಾರಣ್ಯ ಮಾಡುವ ಅರಣ್ಯ ಇಲಾಖೆ ವಿರುದ್ಧ ಹೋರಾಟ ಅಗತ್ಯ

23 skpp 2
ಸಕಲೇಶಪುರ ತಾಲೂಕಿನ ಕಾಡುಮನೆ ಗ್ರಾಮದಲ್ಲಿ ಬುಧವಾರ ಸಮಾಲೋಚನಾ ಸಭೆ ಆಯೋಜಿಸಲಾಗಿತ್ತು. ಶಾಸಕ ಸಿಮೆಂಟ್ ಮಂಜು ಇತರರು ಇದ್ದರು.
Published on

ಸಕಲೇಶಪುರ: ನೂರು ವರ್ಷಗಳ ಹಿಂದಿನ ಯೋಜನೆಯನ್ನು ಇಂದು ಜಾರಿಗೊಳಿಸುವ ಅರಣ್ಯ ಇಲಾಖೆ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಬೇಕು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ಮೂರ್ಕಣ್ಣುಗುಡ್ಡ ಸೆಕ್ಷನ್ 4ರ ಬಾಧಿತರಾದ ಕಾಡುಮನೆ, ಕ್ಯಾಮನಹಳ್ಳಿ, ಜಂಭರಡಿ, ಅಚ್ಚನಹಳ್ಳಿ, ಅಗನಿ, ನಡಹಳ್ಳಿ, ಮಕ್ಕಿಹಳ್ಳಿ, ಮದನಾಪುರ ಗ್ರಾಮಸ್ಥರು ಅರಣ್ಯ ಇಲಾಖೆಯಿಂದಾಗುವ ದೌರ್ಜನ್ಯ ವಿರೋಧಿಸಿ ತಾಲೂಕಿನ ಕಾಡುಮನೆ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಸಮಾಲೋಚನಾ ಸಭೆ ಉದ್ಘಾಟಿಸಿ ಮಾತನಾಡಿದರು.

1920ರಲ್ಲಿ ರಕ್ಷಿತಾರಣ್ಯ ಮಾಡುವ ಉದ್ದೇಶದಿಂದ ಇಲಾಖೆ ಸೆಕ್ಷನ್ 4 ಹೊರಡಿಸಿದೆ. ಆದರೆ, ನಂತರದ ನೂರು ವರ್ಷಗಳಲ್ಲಿ ಈ ಯೋಜನೆ ಸಂಬಂಧ ಯಾವುದೇ ಪ್ರಗತಿ ಮಾಡಲಾಗಿಲ್ಲ. ಆದರೆ, ನೂರು ವರ್ಷಗಳ ನಂತರ ಯೋಜನೆ ಜಾರಿಗೊಳಿಸುವ ಹುನ್ನಾರ ನಡೆಸುತ್ತಿರುವ ಅರಣ್ಯ ಇಲಾಖೆ ಸ್ಥಳೀಯರಿಗೆ ಕಿರುಕುಳ ನೀಡುತ್ತಿದೆ. ಇದು ಅಕ್ಷಮ್ಯ ಎಂದು ಆರೋಪಿಸಿದರು.

ಅಂದು ಈ ಭಾಗದಲ್ಲಿದ್ದ ಜನಸಂಖ್ಯೆ ಹಾಗೂ ಬೆಳೆಗಳ ಸ್ಥಿತಿಯೇ ಬೇರೆ ಇದ್ದರೆ ಇಂದಿನ ಸ್ಥಿತಿಯೇ ಬೇರೆ ಇದೆ. ಆದ್ದರಿಂದ ಮೂರ್ಕಣ್ಣ ಗುಡ್ಡ ವ್ಯಾಪ್ತಿಯನ್ನು ರಕ್ಷಿತಾರಣ್ಯ ಪ್ರದೇಶ ಮಾಡುವ ಅರಣ್ಯ ಇಲಾಖೆ ಕ್ರಮದ ವಿರುದ್ಧ ಒಟ್ಟಾಗಿ ಹೋರಾಟ ಮಾಡುವ ಅಗತ್ಯವಿದೆ ಎಂದರು.

ಅಂದು ಪೂರ್ವಿಕರು ಅರಣ್ಯ ರಕ್ಷಿಸಿದ್ದಕ್ಕಾಗಿ ನಾವು ಇಂದಿನ ಜನತೆ ಪಶ್ಚಾತ್ತಾಪ ಪಡುವಂತಾಗಿದೆ. ಇಂದು ತಾಲೂಕಿನಲ್ಲಿ ಅರಣ್ಯ ಇರುವುದರಿಂದ ಹೆಚ್ಚಿನ ಮಳೆ ಬೀಳುತ್ತಿದೆ. ಇದರಿಂದಾಗಿ ರಾಜ್ಯದ ಬಹುತೇಕ ಜಿಲ್ಲೆಗಳಿಗೆ ನೀರು ಪೊರೈಕೆಯಾಗುತ್ತಿದೆ. ಇದರಿಂದ ಇಂದಿನ ಹಿರಿಯ ಅಧಿಕಾರಿಗಳು ಅರಣ್ಯ ಉಳಿಸುವ ಮಾತನಾಡುತ್ತಿದ್ದಾರೆ. ಸ್ಥಳೀಯ ಜನರು ಅರಣ್ಯ ನಾಶಕ್ಕೆ ಮನಸು ಮಾಡಿದರೆ ಅರಣ್ಯ ಉಳಿಯುತ್ತಿರಲಿಲ್ಲ.

ಅರಣ್ಯಇಲಾಖೆ ಹುಟ್ಟುವ ಮುನ್ನ ಪೂರ್ವಿಕರು ಇಲ್ಲಿ ಅರಣ್ಯ ನಿರ್ಮಿಸಿಕೊಂಡು ಜೀವನ ನಡೆಸುತ್ತಿದ್ದರು. ಆದರೆ, ಇಂದು ಅರಣ್ಯ ಇಲಾಖೆ ಅಧಿಕಾರಿಗಳು ಕಾನೂನು ಮರ್ಮವನ್ನೇ ಅರಿಯದೆ ರೈತರಿಗೆ ನೋಟಿಸ್ ನೀಡುವ ಮೂಲಕ ಹಿಂಸೆ ನೀಡುತ್ತಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿ ನ್ಯಾಯ ಒದಗಿಸುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದರು.

ಕಾನೂನು ತಜ್ಞ ಸುಧೀಶ್ ಮಾತನಾಡಿ, ಸೆಕ್ಷನ್ 4ರ ಅಧಿಸೂಚನೆ ಪ್ರಕಾರ ಅರಣ್ಯ ಇಲಾಖೆ ಅಧಿಕಾರಿಯ ಅಧಿಕಾರ. ಆದರೆ, ಆ ಭೂಮಿ ಅರಣ್ಯವಾಗಬೇಕಾದರೆ ಅಲ್ಲಿನ ನಿವಾಸಿಗಳ ಒಪ್ಪಿಗೆಯೂ ಬೇಕು. ಇದು ಮೂರ್ಕಣ್ಣಗುಡ್ಡ ವ್ಯಾಪ್ತಿಯಲ್ಲಿ ನಡೆದಿಲ್ಲ. ಸೆಕ್ಷನ್ 4ರ ಅರಣ್ಯ ಘೋಷಣೆ ಹಿನ್ನೆಲೆಯಲ್ಲಿ ನಡೆಯುತ್ತಿರುವ ಅರಣ್ಯ ಇಲಾಖೆ ಕ್ರಮ ಸಾಕಷ್ಟು ಕಾನೂನುಬಾಹಿರವಾಗಿ ಉಳಿದಿದೆ ಎಂದರು.

ನಿವೃತ್ತ ತಹಸೀಲ್ದಾರ್ ಅಣ್ಣೇಗೌಡ ಮಾತನಾಡಿ, ಬ್ರಿಟಿಷ್ ಸರ್ಕಾರ ಮೂರ್ಕಣ್ಣಗುಡ್ಡ ವ್ಯಾಪ್ತಿಯ 2,800.38 ಎಕರೆ ಭೂಮಿಯನ್ನು ಕಂದಾಯ ಭೂಮಿಯಾಗಿಯೇ ಉಳಿಸಿತ್ತು. ಸತತ ಒಂದು ಶತಮಾನದ ದಾಖಲೆಗಳನ್ನು ಸಲ್ಲಿಸಬೇಕು ಎಂದರೆ ಪ್ರತಿಯೊಬ್ಬ ರೈತರು ಸಲ್ಲಿಸಬೇಕು. ರೈತರ ಮಧ್ಯೆ ಹೊಂದಾಣಿಕೆ ಇಲ್ಲದಿದ್ದರೆ ಇಡೀ ಮೂರ್ಕಣ್ಣಗುಡ್ಡ ವ್ಯಾಪ್ತಿಯ ರೈತರ ಜಮೀನು ಅರಣ್ಯ ಇಲಾಖೆ ಪಾಲಾಗಲಿದೆ ಎಂದು ಹೇಳಿದರು.

ಕಂದಾಯ ಹಾಗೂ ಅರಣ್ಯ ಭೂಮಿಯನ್ನು ಸರ್ವೇ ನಡೆಸದೆ ಅರಣ್ಯ ಇಲಾಖೆ ಅಧಿಕಾರಿಗಳು ರೈತರಿಗೆ ನೋಟಿಸ್ ನೀಡಬಾರದೆಂದು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದ್ದಾರೆ. ಇದೇ ರೀತಿಯ ಹೋರಾಟವನ್ನು ಸಕಲೇಶಪುರ ತಾಲೂಕಿನಲ್ಲೂ ಹೋರಾಟ ನಡೆಸಬೇಕಿದೆ ಎಂದು ತಿಳಿಸಿದರು.

ಹಾಸನ ಜಿಲ್ಲಾ ಬೆಳೆಗಾರರ ಸಂಘದ ಕಾರ್ಯದರ್ಶಿ ಲೋಹಿತ್ ಮಾತನಾಡಿ, ಸೆಕ್ಷನ್ 4 ವಿರುದ್ಧ ಬೆಳೆಗಾರರ ಸಂಘ ಹೋರಾಟ ಮಾಡುತ್ತಿದೆ. ಈ ಹೋರಾಟದ ಪ್ರತಿಯೊಂದು ಹಾದಿಯಲ್ಲೂ ಸಂಘ ಕೈ ಜೋಡಿಸುತ್ತದೆ ಎಂದರು.

ಬೆಳೆಗಾರ ಅಚ್ಚನಹಳ್ಳಿ ಪೂರ್ಣೇಶ್, ಸುಭಾಷ್ ಮಾತನಾಡಿದರು. ಗ್ರಾ.ಪಂ. ಅಧ್ಯಕ್ಷ ಜಯಪಾಲ್, ವಲಯ ಅರಣ್ಯಾಧಿಕಾರಿ ಹೇಮಂತ್ ಕುಮಾರ್, ಬೆಳೆಗಾರರ ಸಂಘದ ಮೇಘರಾಜ್, ಕಾಡುಮನೆ ಗ್ರಾಮಸ್ಥರಾದ ಪ್ರದೀಪ್, ವಿಜಿ, ಅನಿಲ್, ಹರೀಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net