

ಬ್ಯಾಡಗಿ: ಶಾಲಾ, ಕಾಲೇಜುಗಳಲ್ಲಿ ಕ್ರೀಡಾಸಕ್ತ ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ನೀಡಿದಾಗ ಮಾತ್ರ ಕ್ರೀಡಾಸಾಧಕರನ್ನು ಕಾಣಲು ಸಾಧ್ಯ ಎಂದು ಪ್ರಾಚಾರ್ಯ ಡಾ.ಎಸ್.ಜಿ. ವೈದ್ಯ ಹೇಳಿದರು.
ಬಿಇಎಸ್ ಶಿಕ್ಷಣ ಸಂಸ್ಥೆಯ ವರ್ತಕರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳ ತಂಡ ಕವಿವಿ ಅಂತರ ಕಾಲೇಜು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿರುವ ಪುರುಷರ ತಂಡಕ್ಕೆ ಶನಿವಾರ ಸಮವಸ್ತ್ರ ವಿತರಿಸಿ ಅವರು ಮಾತನಾಡಿದರು.
ಕ್ರೀಡಾ ಪ್ರತಿಭೆಗಳು ಅವಕಾಶ ವಂಚಿತರಾದರೆ ಸಮಸ್ತ ಕ್ರೀಡಾಲೋಕಕ್ಕೆ ಹಾನಿಯಾಗಲಿದೆ. ಈ ನಿಟ್ಟಿನಲ್ಲಿ ಶಿಕ್ಷಣದೊಂದಿಗೆ ಕ್ರೀಡಾಪಟುಗಳಿಗೆ ಕಬಡ್ಡಿ ತರಬೇತಿ ಸೇರಿದಂತೆ ಶಿಕ್ಷಣಕ್ಕೆ ಅವಶ್ಯವಿರುವ ಸಕಲ ಸೌಲಭ್ಯ ಕಲ್ಪಿಸಲು ನಮ್ಮ ಮಹಾವಿದ್ಯಾಲಯ ಬದ್ಧವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಪ್ರಚಲಿತವಿದ್ದ ಕಬಡ್ಡಿ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶಿಷ್ಟ ಸ್ಥಾನ ಪಡೆದುಕೊಂಡಿದೆ. ಮಣ್ಣಿನಲ್ಲಿ ಆಡುವ ಬದಲಾಗಿ ಮ್ಯಾಟ್‌ಗಳ ಮೇಲೆ, ಶೂ ಧರಿಸಿ ಆಟವಾಡುತ್ತಿರುವುದು ಸಂತಸದ ಸಂಗತಿಯಾಗಿದೆ. ಕಬಡ್ಡಿ ಪಂದ್ಯಾವಳಿ ಅಳ್ನಾವರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಜು. 17ರಿಂದ 19ರವರೆಗೆ ನಡೆಯಲಿದ್ದು, ತಂಡಕ್ಕೆ ಎಲ್ಲ ನೆರವು ನೀಡುವುದಾಗಿ ತಿಳಿಸಿದರು.
ಶಿಕ್ಷಣ ಪ್ರೇಮಿ ಎಸ್.ಆರ್. ಹದ್ದಪ್ಪನವರ, ಕಬಡ್ಡಿ ಕೋಚ್ ಮಂಜುಳಾ ಭಜಂತ್ರಿ, ದೈಹಿಕ ಶಿಕ್ಷಣ ನಿರ್ದೇಶಕ ಶಶಿಧರ ಮಾಗೋಡ, ಉಪನ್ಯಾಸಕರಾದ ಎನ್.ಎಸ್. ಪ್ರಶಾಂತ, ಸುರೇಶ ಪಾಂಗಿ, ಪ್ರಭುಲಿಂಗ ದೊಡ್ಮನಿ, ನಿಂಗಪ್ಪ ಕುಡಪಲಿ, ಪ್ರಶಾಂತ ಜಂಗಳೇರ, ಎಂ.ಎಚ್. ಮುಧೋಳಕರ, ವಿಶ್ವನಾಥ ವಡಯನಪುರ, ಶಿವನಗೌಡ ಪಾಟೀಲ, ಅಂಬಿಕಾ ನವಲೆ, ಜ್ಯೋತಿ ಹಿರೇಮಠ, ಗ್ರಂಥಪಾಲಕ ಸಂತೋಷ ಉದ್ಯೋಗಣ್ಣವರ, ಎಂ.ಆರ್.ಕೋಡಿಹಳ್ಳಿ ಇದ್ದರು.