ಬದುಕಿನ ಸಾಹಿತ್ಯಕ್ಕೆ ಒತ್ತು ನೀಡುವುದು ಅಗತ್ಯ

Story Event in Hanagal
Published on

ಹಾನಗಲ್ಲ: ಓದು ನಮ್ಮ ಅನುಭವವನ್ನು ವಿಸ್ತರಿಸುತ್ತದೆ. ಬರವಣಿಗೆ ನಮ್ಮನ್ನು ಬಹುಕಾಲ ನಿಲ್ಲಿಸುತ್ತದೆ. ಬಹುಪರಾಕ್ ಸಾಹಿತ್ಯಕ್ಕೆ ತಿಲಾಂಜಲಿ ಹಾಡಿ ಬದುಕಿನ ಸಾಹಿತ್ಯಕ್ಕೆ ಒತ್ತು ನೀಡುವುದು ಇಂದಿನ ಅಗತ್ಯ ಎಂದು ಕಥೆಗಾರ ಅಬ್ದುಲ್​ರಶೀದ್ ಹೇಳಿದರು.

ತಾಲೂಕಿನ ರಂಗಗ್ರಾಮ ಶೇಷಗಿರಿಯಲ್ಲಿ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಗಜಾನನ ಯುವಕ ಮಂಡಳ, ಶೇಷಗಿರಿ ಕಲಾ ತಂಡ ಸಂಯುಕ್ತವಾಗಿ ಆಯೋಜಿಸಿದ ಡಾ.ವಿಠ್ಠಲ ಭಂಡಾರಿ ಅವರ ‘ಕನಸಿನ ದೇಶ ಸುತ್ತು ಕೋಶ ಓದು’ ಕಾರ್ಯಕ್ರಮದಲ್ಲಿ ಅಬ್ದುಲ್​ರಶೀದ್ ಅವರ ಕಥೆಗಳ ಕುರಿತಾದ ಒಂದು ದಿನದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. ಬರಹ ಖಾಸಗಿಯಾಗಿರಬೇಕು. ಅದರ ಸಂವೇದನೆಗಳು ಓದುಗರ ಮನದಾಳದಲ್ಲಿ ಹೊಸ ಚಿಂತನೆಗಳಿಗೆ ಅವಕಾಶ ಮಾಡಿ ಕೊಡಬೇಕು. ಕಥೆಗೆ ಒಂದು ಮಾಂತ್ರಿಕತೆ ಇದೆ. ಕಥೆ ಓದುವುದು ಬರೆಯುವಷ್ಟೇ ಖುಷಿ ಕೊಡುವ ಸಂಗತಿ. ಕಥೆಗಾರನಿಗೆ ಸಾಹಿತ್ಯದ ಆತುರ ಬೇಡ. ಒಳ್ಳೆಯ ಅವಕಾಶಕ್ಕಾಗಿ ಬರವಣಿಗೆಯ ಸಮಾಧಾನವಿರಲಿ. ಎಲ್ಲೆಡೆ ಕಥೆಗಳಿವೆ. ಆದರೆ, ಕಥೆಗಾರನಿಗೆ ನೋಡುವ ದೃಷ್ಟಿ ಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ನಿವೃತ್ತ ಉಪನ್ಯಾಸಕ ಮಾರುತಿ ಶಿಡ್ಲಾಪುರ, ಅಂತರಂಗದ ಸಂವೇದನೆಗಳನ್ನು ಪರಿಶುದ್ಧಗೊಳಿಸಿ ವಾಸ್ತವ ಬದುಕಿನ ಸತ್ಯಗಳನ್ನು ತೆರೆದಿಡುವ ಸಾಹಿತ್ಯದ ಓದು ಜೀವಂತಿಕೆ ಪಡೆಯಬೇಕು. ವಿದ್ಯಾರ್ಥಿಗಳ ಮನಸ್ಸಿನಲ್ಲಿ ಓದಿನ ವಿಶಾಲ ಕ್ಷಿತಿಜವನ್ನು ತೆರೆದಿಡಬೇಕಾದ ಅಗತ್ಯವಿದೆ ಎಂದರು.

ಸಾಹಿತಿ ಸತೀಶ ಕುಲಕರ್ಣಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೊಸ ಪೀಳಿಗೆ ಸಾಹಿತ್ಯ ಕೃಷಿಯಲ್ಲಿ ತೊಡಗುವ ಅಗತ್ಯವಿದೆ ಎಂದರು.

ಸಾಹಿತಿ ಸುಧಾ ಆಡುಕಳ (ಮೈಸೂರು) ಮಾತನಾಡಿದರು.

ಉಪನ್ಯಾಸಕ ಉಮೇಶ ನಾಯಕ, ಸಾಹಿತಿ ಮಾಧವಿ ಭಂಡಾರಿ, ಶೇಷಗಿರಿ ಕಲಾ ತಂಡದ ಅಧ್ಯಕ್ಷ ಪ್ರಭು ಗುರಪ್ಪನವರ, ಸಂಚಾಲಕ ನಾಗರಾಜ ಧಾರೇಶ್ವರ, ಡಾ.ಹೊನ್ನಪ್ಪ ಭೋವಿ, ನಿರಂಜನ ಗುಡಿ, ಎಂ. ಪ್ರಸನ್ನಕುಮಾರ, ಡಾ. ಗಂಗಾ ನಾಯಕ, ಪೃಥ್ವಿರಾಜ ಬೆಟಗೇರಿ, ನಾಗರಾಜ ಹುಡೇದ, ಈರಣ್ಣ ಬೆಳವಡಿ, ಶೇಖರ ಭಜಂತ್ರಿ, ಶಂಕ್ರಣ್ಙ ಬಡಿಗೇರ, ಜುಬೇದಾ ನಾಯಕ, ರೇಣುಕಾ ಗುಡಿಮನಿ, ಪ್ರತಿಕ, ಪ್ರಕಾಶಗೌಡ ಪಾಟೀಲ ಇತರರು ಇದ್ದರು.

ಕಲಾವಿದರಾದ ಸಂದೇಶ ಹಿರೇಮಠ, ನರಸಿಂಹ ಕೋಮಾರ, ಪರಮೇಶ್ವರ ಹಿರೇಮಠ, ವಿಶ್ವನಾಥ ಹಿರೇಮಠ ಭಾವಗೀತೆಗಳನ್ನು ಹಾಡಿದರು. ನಿರ್ದೇಶಕ ಎಸ್.ಎಲ್. ಸಂತೋಷ ಸ್ವಾಗತಿಸಿದರು. ದೇವಿಪ್ರಸಾದ ಎರತೋಟಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net