

ಹಿರೀಸಾವೆ: ಋತುಮಾನಕ್ಕೆ ಸರಿಯಾಗಿ ಪ್ರಕೃತಿದತ್ತವಾದ ಆಹಾರವನ್ನು ಸೇವಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಶ್ರೀ ಕಾಲಭೈರವೇಶ್ವರ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ.ಕಿರಣ್‌ಕುಮಾರ್ ಹೇಳಿದರು.
ಪಟ್ಟಣದ ಎಸ್‌ಎನ್‌ಎಚ್‌ಸಿಎಸ್ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶ್ರೀ ಕಾಲಭೈರವೇಶ್ವರ ಆಯುರ್ವೇದ ವೈದ್ಯಕೀಯ ಕಾಲೇಜು ವತಿಯಿಂದ ಏರ್ಪಡಿಸಿದ್ದ ‘ಪ್ರಕೃತಿಯೊಂದಿಗೆ ನಮ್ಮ ಬದುಕು ಹಾಗೂ ದೇಶ್ ಕಾ ಪ್ರಕೃತಿ ಪರೀಕ್ಷಾ ಅಭಿಯಾನ’ ದಲ್ಲಿ ಮಾತನಾಡಿದರು.
ಆಯುರ್ವೇದ ಎಂಬುದು ಅದ್ಭುತ ಜ್ಞಾನ. ಚಿಕಿತ್ಸಾ ಪದ್ಧತಿಗಿಂತ ಆರೋಗ್ಯವನ್ನು ಹಾಳು ಮಾಡಿಕೊಳ್ಳದೆ ಹೇಗೆ ಬದುಕಬಹುದು ಎಂಬುದನ್ನು ತಿಳಿಸುತ್ತದೆ. ಜ್ವರ, ಶೀತ, ನೆಗಡಿ, ಕೆಮ್ಮ ಹಾಗೂ ಕಫ ಸೇರಿದಂತೆ ಹಲವು ರೋಗಗಳಿಗೆ ಅಡುಗೆ ಕೋಣೆಯಲ್ಲಿನ ಪದಾರ್ಥಗಳಿಂದ ಔಷಧ ಮಾಡಿಕೊಳ್ಳಬಹುದು ಎಂದರು.
ಯಾವುದೇ ರೋಗ ಬಂದ ತಕ್ಷಣ ಆಯುರ್ವೇದ ಚಿಕಿತ್ಸೆ ಪಡೆಯುವುದರಿಂದ ಯಾವುದೇ ಸಮಸ್ಯೆ ಇಲ್ಲದೆ ಉತ್ತಮವಾಗಿ ಗುಣಮುಖರಾಗಬಹುದು. ಪೂರ್ವಜರು ಸಾವಿರಾರು ವರ್ಷಗಳ ಹಿಂದಿನಿಂದಲೂ ಆಯುರ್ವೇದ ಬಳಸುತ್ತಿದ್ದರಿಂದ ನೂರಾರು ವರ್ಷಗಳ ಕಾಲ ಬದುಕುತಿದ್ದರು ಎಂದು ತಿಳಿಸಿದರು.
ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ.ಪುಷ್ಪಾ ಜೋಗಿಹಳ್ಳಿ ಮಾತನಾಡಿ, ನಮಗೆ ಯಾವುದೇ ರೋಗಗಳು ಬಾರದಂತೆ ನೋಡಿಕೊಳ್ಳಲು ದೇಹಕ್ಕೆ ಅಗತ್ಯವಿರುವ ಉತ್ತಮ ಆಹಾರವನ್ನು ಸೇವಿಸಬೇಕು ಎಂದು ಸಲಹೆ ನೀಡಿದರು.
ಶ್ರೀ ಕಾಲಭೈರವೇಶ್ವರ ಆಯುರ್ವೇದ ವೈದ್ಯಕೀಯ ಕಾಲೇಜಿನ 50 ವೈದ್ಯಕೀಯ ವಿದ್ಯಾರ್ಥಿಗಳು ಹಿರೀಸಾವೆ, ದಿಡಗ ಹಾಗೂ ವಿವಿಧ ಗ್ರಾಮಗಳಲ್ಲಿ ಕೇಂದ್ರ ಸರ್ಕಾರದ ಆಯುಷ್ ಇಲಾಖೆಯ ದೇಶ್ ಕಾ ಪ್ರಕೃತಿ ಪರೀಕ್ಷಾ ಅಭಿಯಾನದ ಬಗ್ಗೆ ಜನರಿಗೆ ಮಾಹಿತಿ ನೀಡಿ, ಆಪ್ ಮೂಲಕ ಹಲವು ಪ್ರಶ್ನೆಗಳನ್ನು ಕೇಳಿದರು. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಸೆನೆಟ್ ಸದಸ್ಯರಾಗಿ ಆಯ್ಕೆಯಾಗಿರುವ ಡಾ.ಕಿರಣ್ ಕುಮಾರ್ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಈ.ಬೋರಣ್ಣ, ಪಿಡಿಒ ಸತೀಶ್, ಕಾಲೇಜಿನ ಪ್ರಾಂಶುಪಾಲ ಲೋಕೇಶ್, ಕಸಾಪ ಹೋಬಳಿ ಘಟಕದ ಅಧ್ಯಕ್ಷ ಪ್ರಮೋದ್, ಮುಖಂಡರಾದ ರವಿಕುಮಾರ್, ಮಂಜುನಾಥ್, ಬೋರೇಗೌಡ, ಬೀಡಾ ಮಂಜುನಾಥ್, ವೆಂಕಟೇಶ್, ಮೋಹನ್ ಇತರರು ಇದ್ದರು.