ಕಲಿಕೆಗೆ ಪೂರಕ ವಾತಾವರಣ ನಿರ್ಮಾಣ ಅಗತ್ಯ

It is necessary to create a supportive environment for learning
ಕೆಎಂಜಿ 14-1 ಕಮತಗಿ ಸಮೀಪದ ಕಡಿವಾಲದಲ್ಲಿ ಹಮ್ಮಿಕೊಂಡಿದ್ದ ಸರ್ಕಾರಿ ಪ್ರಾಥಮಿಕ ಶಾಲೆಯ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಎಚ್.ವೈ. ಮೇಟಿ ಮಾತನಾಡಿದರು. ಹುಚ್ಚೇಶ್ವರ ಸ್ವಾಮೀಜಿ, ಜಾಸ್ಮೀನ್ ಕಿಲ್ಲೇದಾರ, ಆರ್.ಎಂ. ಬಾಗವಾನ, ಪಿ.ಐ. ಲಮಾಣಿ ಇತರರಿದ್ದರು.
Published on

ಕಮತಗಿ: ಸರ್ಕಾರಿ ಶಾಲೆಗಳಲ್ಲಿ ಅಧ್ಯಯನ ಮಾಡುತ್ತಿರುವ ಮಕ್ಕಳ ಕಲಿಕೆಗೆ ಉತ್ತಮ ವಾತಾವರಣ ನಿರ್ಮಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಸರ್ಕಾರಿ ಶಾಲೆಗಳ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಅಗತ್ಯ ನೆರವು ನೀಡುತ್ತಿದೆ ಎಂದು ಶಾಸಕ ಎಚ್.ವೈ. ಮೇಟಿ ಹೇಳಿದರು.

ಸಮೀಪದ ಕಡಿವಾಲ-ಕಲ್ಲಾಪುರ ಗ್ರಾಮದಲ್ಲಿ ಬಾಗಲಕೋಟೆ ಜಿಪಂ ಇಂಜಿನಿಯರಿಂಗ್ ವಿಭಾಗದಿಂದ 2022-23ನೇ ಸಾಲಿನಲ್ಲಿ ವಿವೇಕ ಶಾಲಾ ಯೋಜನೆಯಡಿ ನಿರ್ಮಾಣವಾದ ಸರ್ಕಾರಿ ಕನ್ನಡ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯ ಎರಡು ನೂತನ ಕೊಠಡಿಗಳನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದೊಂದಿಗೆ ನೈತಿಕ ಮೌಲ್ಯಗಳ ಪಾಠ ಬೋಧನೆಯಾಗುತ್ತದೆ. ಸರ್ಕಾರಿ ಶಾಲೆಗಳಿಗೆ ಉತ್ತಮವಾದ ಕಟ್ಟಡ, ಕುಡಿಯುವ ನೀರು, ಬಿಸಿಯೂಟ ಸೇರಿ ಇತರೆ ಸೌಲಭ್ಯಗಳನ್ನು ಸರ್ಕಾರ ನೀಡುತ್ತಿದ್ದು, ಅವುಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಹುನಗುಂದ ಕ್ಷೇತ್ರ ಶಿಕ್ಷಣಾಧಿಕಾರಿ ಜಾಸ್ಮೀನ್ ಕಿಲ್ಲೇದಾರ ಮಾತನಾಡಿ, ಸರ್ಕಾರಿ ಶಾಲೆಗಳು ಉತ್ತಮವಾದ ಕಟ್ಟಡಗಳನ್ನು ಹೊಂದಿದ್ದಲ್ಲದೆ ಗುಣಮಟ್ಟದ ಕಲಿಕೆಯೂ ಇರುತ್ತದೆ. ಮಗು ಶಿಕ್ಷಣ ಪೂರೈಸಿಕೊಳ್ಳಲು ಉತ್ತಮ ವಾತಾವರಣವಿರಬೇಕು. ವಿದ್ಯಾರ್ಥಿ, ಪಾಲಕ ಹಾಗೂ ಶಿಕ್ಷಕರು ಶಿಕ್ಷಣ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದ್ದಾರೆ. ಶಾಲೆಗಳು ಜೀವಂತ ದೇವಾಲಯಗಳಿದ್ದಂತೆ. ಇಲ್ಲಿ ನೈತಿಕ, ಮಾನವೀಯ ಮೌಲ್ಯಗಳ ಬೋಧನೆ, ಪಠ್ಯ-ಪಠ್ಯೇತರ ಕಲಿಕೆಯಾಗುತ್ತದೆ ಎಂದರು.

ಜಿಪಂ ಸಹಾಯಕ ಕಾರ್ಯನಿರ್ವಾಹಕಾಧಿಕಾರಿ ಎಂ.ಎಂ. ಪಾಟೀಲ, ಗ್ರಾಪಂ ಪಿಡಿಒ ಮುತ್ತಣ್ಣ ಚಲವಾದಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಆರ್.ಎಂ. ಬಾಗವಾನ, ಸಮೂಹ ಸಂಪನ್ಮೂಲ ವ್ಯಕ್ತಿ ಪಿ.ಐ. ಲಮಾಣಿ, ಎಸ್‌ಡಿಎಂಸಿ ಅಧ್ಯಕ್ಷ ಬಸಪ್ಪ ಹೊಸಗೌಡ್ರ, ಶಿದ್ರಾಮಪ್ಪ ಹೊಸಗೌಡ್ರ, ಯಮನೂರ ಬಡಕನ್ನವರ, ಶಿವಯೋಗೆಪ್ಪ ತೆಗ್ಗಿ, ಬಸವರಾಜ ಬಡಕನ್ನವರ, ಯಮನಪ್ಪ ಮಾದರ, ರಮೇಶ ಹೂವಿನಹಳ್ಳಿ, ಮುಖ್ಯಶಿಕ್ಷಕ ಆಯ್.ಎಚ್. ಮಕಾನದಾರ, ಶಿಕ್ಷಕರಾದ ಆರ್.ಡಿ. ಚಾಪಿ, ಬಿ.ಸಿ. ಚೌಡಾಪೂರ, ಎಸ್.ಪಿ. ಶಾಂತರಾಜ, ಆರ್.ಕೆ. ಚವ್ಹಾಣ, ವಿಶಾಲಾಕ್ಷಿ, ರೇಷ್ಮಾ ನಾರಾಯಣಪೂರ ಇದ್ದರು.

ಎನ್‌ಎಸ್‌ಎಸ್ ಸ್ವಯಂ ಸೇವಕರು ಪ್ರಾರ್ಥಿಸಿದರು. ಶಿಕ್ಷಕ ಬಿ.ಸಿ. ಚೌಡಾಪೂರ ನಿರೂಪಿಸಿದರು. ಆರ್.ಕೆ. ಚವ್ಹಾಣ ಸ್ವಾಗತಿಸಿದರು. ಎಸ್.ಪಿ. ಶಾಂತರಾಜ ವಂದಿಸಿದರು.

ನಾನು ಚುನಾವಣೆಗೆ ನಿಲ್ಲೋದಿಲ್ಲ

ಕಳೆದ ಚುನಾವಣೆಯೇ ನನಗೆ ಕೊನೇ ಚುನಾವಣೆ. ಇನ್ನೂ ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ನನ್ನ ರಾಜಕೀಯ ಜೀವನದಲ್ಲಿ ಲೋಕಸಭೆ, ವಿಧಾನಸಭೆಯ 10 ಚುನಾವಣೆಗಳಲ್ಲಿ ಸ್ಪರ್ಧಿಸಿದ್ದೇನೆ. ಸೋಲು-ಗೆಲುವು ಕಂಡಿದ್ದೇನೆ. ನಾನು ಸ್ಪರ್ಧಿಸಿದ ಎಲ್ಲ ಚುನಾವಣೆಗಳಲ್ಲಿ ಕಡಿವಾಲ ಗ್ರಾಮಸ್ಥರು ಹೆಚ್ಚಿನ ಮತಗಳನ್ನು ಹಾಕಿ ಗೆಲ್ಲಿಸಿದ್ದೀರಿ. ನಿಮ್ಮೂರಿನ ಯಾವುದೇ ಕೆಲಸವಿರಲಿ ಅದನ್ನು ಮಾಡಿ ನಿಮ್ಮ ಋಣ ತೀರಿಸುವೆ.

ಎಚ್.ವೈ. ಮೇಟಿ, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net