ಹಸಿರು ಆರ್ಥಿಕತೆ ರೂಪಿಸುವುದು ಅಗತ್ಯ

mysore
Published on

ಮೈಸೂರು: ಜಾಗತಿಕ ಸಮಸ್ಯೆಯಾಗಿ ಕಾಡುತ್ತಿರುವ ಹವಾಮಾನ ಬದಲಾವಣೆಯ ಈ ಸಂದರ್ಭದಲ್ಲಿ ಹಸಿರು ಆರ್ಥಿಕತೆ ರೂಪಿಸುವುದು ಅಗತ್ಯವಾಗಿದೆ ಎಂದು ಚೆನ್ನೈನ ಶಾಸ್ತ್ರ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಮತ್ತು ಸಾರ್ವಜನಿಕ ನೀತಿ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಸಿ.ಎಸ್. ಅನುರಾಧಾ ಹೇಳಿದರು.


ಮೈಸೂರು ವಿಶ್ವವಿದ್ಯಾಲಯದ ಅಂತಾರಾಷ್ಟ್ರೀಯ ಸಂಬಂಧ ವಿಭಾಗ, ಮಹಾರಾಜ ಕಾಲೇಜು, ಕಾವೇರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಸಹಯೋಗದಲ್ಲಿ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಭಾನುವಾರ ಆಯೋಜಿಸಿದ್ದ ‘ಯುನಿರ್ವಸಿಟಿ ಕನೆಕ್ಟ್ ಹಬ್ ಎಂಗೇಜಿಂಗ್ ಯಂಗ್ ಮೈಂಡ್ಸ್’ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದರು.


ನವೀಕರಿಸಬಹುದಾದ ಇಂಧನ ಬಳಕೆ, ಪರಿಸರ ಸ್ನೇಹಿ ಕಟ್ಟಡಗಳು, ಉತ್ತಮ ಸಾರಿಗೆ ವ್ಯವಸ್ಥೆ ಮೊದಲಾದವು ಇರಬೇಕು. ಹಸಿರು ಆರ್ಥಿಕತೆಯಲ್ಲಿ ಯಾರೂ ಹಸಿದಿರುವುದಿಲ್ಲ. ಯಾರೂ ನಿರುದ್ಯೋಗಿಗಳಾಗಿರುವುದಿಲ್ಲ ಹಾಗೂ ಭವಿಷ್ಯದ ಪೀಳಿಗೆಗೆ ತೊಂದರೆ ಯಾಗುವುದಿಲ್ಲ. ಇದಕ್ಕಾಗಿ ಹಸಿರು ಆರ್ಥಿಕತೆ ಬೇಕು ಎಂದು ಹೇಳಿದರು.


ಭೂಮಿಯ ಮೇಲ್ಮನಲ್ಲಿರುವ ಸಂಪನ್ಮೂಲಗಳನ್ನು ಮಾತ್ರ ಬಳಕೆ ಮಾಡುವ ನಿಟ್ಟಿನಲ್ಲಿ ನಮ್ಮ ಮನಸ್ಥಿತಿ ಬದಲಾಗಬೇಕು. ಸುಸ್ಥಿರ ತಂತ್ರಜ್ಞಾನ ಇರಬೇಕು ಎಂದರು.


ಕಾವೇರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಗಿರೀಶ್ ದೇಸಾಯಿ ಮಾತನಾಡಿ,
ಸಾಂಪ್ರದಾಯಿಕ ಮತ್ತು ಸುಸ್ಥಿರ ಅಭಿವೃದ್ಧಿಗೆ ಆಯುರ್ವೇದ ಪೂರಕವಾಗಿದೆ. ಆರೋಗ್ಯ ವೃದ್ಧಿಗೂ ಇದುವೇ ರಹದಾರಿಯಾಗಿದೆ ಎಂದರು.


ಆಯುರ್ವೇದ ವೈದ್ಯಕೀಯ ಪದ್ಧತಿ ಪರಿಸರ, ಆರ್ಥಿಕತೆ, ಸಾಮಾಜಿಕ ವ್ಯವಸ್ಥೆ ಪೂರಕವಾಗಿದ್ದು, ಇದರಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ. ನೈಸರ್ಗಿಕ ವಸ್ತುಗಳ ಬಳಕೆ ಒತ್ತು ನೀಡುವುದರಿಂದ ಹಸಿರುಮನೆಗೂ ಧಕ್ಕೆಯಾಗುವುದಿಲ್ಲ. ಕಡಿಮೆ ದರ, ಸುಲಭವಾಗಿ ಈ ವೈದ್ಯಕೀಯ ಪದ್ಧತಿಯ ಮೂಲಕ ಜನರ ಆರೋಗ್ಯ ಸೇವೆ ನೀಡಬಹುದಾಗಿದೆ ಎಂದರು. ಬಳಿಕ ವಿವಿಧ ತಜ್ಞರು ವಿಷಯ ಮಂಡಿಸಿದರು.


ಉದ್ಘಾಟನಾ ಕಾರ್ಯಕ್ರಮದಲ್ಲಿ ನಿವೃತ್ತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ, ಆರ್‌ಐಎಸ್ ಸದಸ್ಯ ಡಾ.ಶೇಷಾದ್ರಿಚಾರಿ, ತಮಿಳುನಾಡಿನ ಸಿ3ಎಸ್‌ನ ಮಹಾನಿರ್ದೇಶಕ ಆರ್.ಎಸ್.ವಾಸನ್, ಮಹಾರಾಜ ಕಾಲೇಜಿನ ಅಂತಾರಾಷ್ಟ್ರೀಯ ಸಂಬಂಧ ವಿಭಾಗದ ಮುಖ್ಯಸ್ಥೆ ಡಾ.ಭಾರತಿ ಹಿರೇಮಠ, ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಸದಾಶಿವೇಗೌಡ, ಕಾವೇರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕ ಡಾ.ಎನ್.ಕೃಷ್ಣಪ್ರಸಾದ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net