

ಹುಬ್ಬಳ್ಳಿ: ದುಡ್ಡಿದ್ದವರು ದೊಡ್ಡವರಲ್ಲ. ಪ್ರತಿ ದಿನ ಸೊಪ್ಪು ಸೇವಿಸಿ ಆರೋಗ್ಯ ಕಾಪಾಡಿಕೊಂಡವರು ದೊಡ್ಡವರು; ಅನ್ನ ಶ್ರೀಮಂತರು. ಪೋಷಕಾಂಶ ಮತ್ತು ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಸೊಪ್ಪುಗಳನ್ನು ನಾವು ಪ್ರತಿ ದಿನ ಸೇವಿಸಬೇಕು ಎಂದು ಮೂರುಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಕಿವಿ ಮಾತು ಹೇಳಿದರು.
ಇಲ್ಲಿಯ ಮೂರು ಸಾವಿರ ಮಠದ ಮೂಜಗಂ ಸಭಾಭವನದಲ್ಲಿ ಆಯೋಜಿಸಿರುವ ಎರಡು ದಿನಗಳ ‘ಸೊಪ್ಪು ಮೇಳ’ವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಆರೋಗ್ಯ ಕಾಪಾಡಲು ಶ್ರಮಿಸುತ್ತಿರುವ ಸಾವಯವ ರೈತರನ್ನು ನಾವೆಲ್ಲ ಪ್ರೋತ್ಸಾಹಿಸಬೇಕು ಎಂದರು.
‘ಅಜ್ಜಿಯ ಮಡಿಲು; ಸೊಪ್ಪಿನ ಕಡಲು’ ಕಾರ್ಯಕ್ರಮದ ಮೂಲಕ ಸಾಗುವಳಿ ಮಾಡದ ಸೊಪ್ಪಿನ ತಳಿಗಳ ಮಹತ್ವದ ಅರಿವು ಮೂಡಿಸುತ್ತಿರುವ ತುಮಕೂರಿನ ಮುರಳೀಧರ ಗುಂಗುರುಮಳೆ ಮಾತನಾಡಿ, ನಮಗೆ ಅರಿವಿಲ್ಲದ ನೂರಾರು ಸೊಪ್ಪುಗಳಿವೆ. ಇವು ಆಹಾರವಾಗಿ, ಔಷಧಿಯಾಗಿ ಬಳಕೆಯಾಗುತ್ತವೆ. ಇಂಥ ಸೊಪ್ಪುಗಳ ಬಗ್ಗೆ ಅರಿತು, ಬಳಕೆ ಮಾಡಬೇಕು ಎಂದರು.
ಸಹಜ ಸಮೃದ್ಧ ಸಂಸ್ಥೆ ನಿರ್ದೇಶಕ ಜಿ. ಕೃಷ್ಣ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ, ಸೊಪ್ಪಿನ ಲೋಕ ದೊಡ್ಡದು. ನಮಗೆ ಗೊತ್ತಿರುವ ಸೊಪ್ಪಿನ ತಳಿಗಳು ಬೆರಳೆಣಿಕೆಯಷ್ಟು. ತಾನಾಗಿಯೇ ಹುಟ್ಟಿ ಬೆಳೆಯುವ ಕಳೆ ಎಂದು ನಿರ್ಲಕ್ಷಕ್ಕೆ ಗುರಿಯಾದ ನೂರಾರು ಸೊಪ್ಪಿನ ತಳಿಗಳು ಔಷಧೀಯ ಗುಣಗಳಿಂದ ಸಮೃದ್ಧವಾಗಿವೆ. ನಮ್ಮ ಆರೋಗ್ಯವನ್ನು ಕಾಪಾಡುತ್ತವೆ. ನಾರಿನಿಂದ ಸಮೃದ್ಧವಾಗಿರುವ ಸೊಪ್ಪು ಸೇವಿಸುವುದರಿಂದ ಮಲಬದ್ಧತೆ, ಮಧು ಮೇಹ, ರಕ್ತಹೀನತೆ, ಅಪೌಷ್ಟಿಕ ಮತ್ತು ಇತರ ಹಳೆಯ ಕಾಯಿಲೆಗಳಿಂದ ಮುಕ್ತಿ ಪಡೆಯಬಹುದು ಎಂದರು.
ಕುಂದಗೋಳ ತಾಲೂಕಿನ ಹಿರೇಬೆಂಡಿಗೇರಿ ಗ್ರಾಮದ ಸುಂದರಮ್ಮ ದೊಡ್ಡಮನಿ, ಸೊಪ್ಪಿನ ಕೃಷಿ ಲಾಭದಾಯಕ ಕುರಿತು ವಿವರಿಸಿದರು.
ರೋಟರಿ ಕ್ಲಬ್ ಅಧ್ಯಕ್ಷ ಬಾಪುಗೌಡ ಬಿರಾದಾರ ‘ಸಕತ್ ಸೊಪ್ಪು’ ಪುಸ್ತಕ ಬಿಡುಗಡೆ ಮಾಡಿದರು.
ರೋಟರಿ ಕ್ಲಬ್ ಕಾರ್ಯದರ್ಶಿ ಎ.ವಿ. ಸಂಕನೂರ ಮಾತನಾಡಿದರು. ಬಿಜಕಲ್ಲಿನ ಶ್ರೀ ಶಿವಲಿಂಗ ಸ್ವಾಮೀಜಿ ಇತರರು ಉಪಸ್ಥಿತರಿದ್ದರು.
ವರೂರಿನ ಜೈನ್ ಎಜಿಎಂ ಆಯುರ್ವೇದ ವೈದ್ಯಕೀಯ ಕಾಲೇಜ್ ವಿದ್ಯಾರ್ಥಿಗಳು ಔಷಧೀಯ ಸೊಪ್ಪುಗಳನ್ನು ಪ್ರದರ್ಶಿಸಿ, ಅವುಗಳ ಮಹತ್ವ ತಿಳಿಸಿದರು. ಆಯೋಜಕ ಶಾಂತಕುಮಾರ .ಸಿ. ನಿರೂಪಿಸಿದರು.
ಇಂದಿನ ಕಾರ್ಯಕ್ರಮ: ಅ. 20ರಂದು ಬೆಳಗ್ಗೆ 10.30ಕ್ಕೆ ಹುಬ್ಬಳ್ಳಿ ರೋಟರಿ ಕ್ಲಬ್ ಆಶ್ರಯದಲ್ಲಿ 5ರಿಂದ 12 ವರ್ಷದ ಮಕ್ಕಳಿಗಾಗಿ ‘ನಾ ಕಂಡಂತೆ ಸೊಪ್ಪು’ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದೆ. ಚಿತ್ರ ಬಿಡಿಸಲು ಅಗತ್ಯವಿರುವ ಬಣ್ಣಗಳನ್ನು ಮಕ್ಕಳು ತಾವೇ ತರಬೇಕು. ಚಿತ್ರ ರಚನೆಗೆ ಅಗತ್ಯವಿರುವ ಡ್ರಾಯಿಂಗ್ ಶೀಟ್ ಆಯೋಜಕರು ನೀಡುವರು. 5ರಿಂದ 9 ವರ್ಷ ಮತ್ತು 9ರಿಂದ 12 ವರ್ಷವೆಂದು ಎರಡು ವಿಭಾಗ ಮಾಡಲಾಗಿದೆ. ಗೆದ್ದವರಿಗೆ ಪ್ರಶಸ್ತಿ ಫಲಕ ಮತ್ತು ಪ್ರಮಾಣ ಪತ್ರ ನೀಡಲಾಗುವುದು. ಮಧ್ಯಾಹ್ನ 12ಗಂಟೆಗೆ ಪರಿಸರ ಅಧ್ಯಯನ ಕೇಂದ್ರದ ಮುರಳೀಧರ ಗುಂಗುರುಮಳೆ ‘ಅಜ್ಜಿಯ ಮಡಿಲು, ಸೊಪ್ಪಿನ ಕಡಲು’ ಕಾರ್ಯಕ್ರಮ ನಡೆಸಿಕೊಡುವರು. ಹೊಲ,ಬೇಲಿ, ಗದ್ದೆ, ಕಾಡು ಮತ್ತು ರಸ್ತೆ ಬದಿ ಸಿಗುವ ನಿಸರ್ಗದತ್ತ ಸೊಪ್ಪಿನ ತಳಿಗಳನ್ನು ಪರಿಚಯಿಸುವರು. ಹಳ್ಳಿಗಾಡಿನ ಅಜ್ಜಿಯಂದಿರು,ದನಗಾಯಿಗಳು ಮತ್ತು ನಾಟಿ ವೈದ್ಯರು ತರಹೇವಾರಿ ಸೊಪ್ಪು ಮತ್ತು ಔಷಧೀಯ ಸಸಿ ತರಲಿದ್ದಾರೆ.