

ಕಾಯಿಲೆ ಬಂದ ಮೇಲೆ ಚಿಂತಿಸುವ ಬದಲು ಬಾರದಂತೆ ಎಚ್ಚರ ವಹಿಸುವುದು ಉತ್ತಮ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ಲಸಿಕೆ ಪಡೆಯದೆ ಬಿಟ್ಟು ಹೋದ ಐದು ವರ್ಷದೊಳಗಿನ ಮಕ್ಕಳು ಮತ್ತು ಗರ್ಭಿಣಿಯರಿಗೆ ಲಸಿಕೆ ನೀಡುವ ಮಹಾ ಅಭಿಯಾನ ‘ಮಿಷನ್ ಇಂದ್ರಧನುಷ್’ಗೆ ಜಿಲ್ಲಾಸ್ಪತ್ರೆಯಲ್ಲಿ ಚಾಲನೆ ನೀಡಿ ಮಾತನಾಡಿ, 5 ವರ್ಷದೊಳಗಿನ ಎಲ್ಲ ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರಲ್ಲಿ ರೋಗನಿರೋಧಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಲಸಿಕೆ ನೀಡಲಾಗುತ್ತಿದೆ. ಕಾಲಕಾಲಕ್ಕೆ ಲಸಿಕೆ ಹಾಕಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಇಂದ್ರಧನುಷ್ ಒಂದು ಯೂನಿವರ್ಸಲ್ ಇಮ್ಯುನೈಜೇಷನ್ ಲಸಿಕಾ ಕಾರ್ಯಕ್ರಮವಾಗಿದೆ. ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತ ರೋಗ ಬರದಂತೆ ಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದರು.
ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾತನಾಡಿ, ಮಾರಣಾಂತಿಕ ಕಾಯಿಲೆಗಳಿಂದ ಜನರನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಕಾರ್ಯಕ್ರಮಗಳನ್ನು ರೂಪಿಸುತ್ತಲೇ ಇವೆ. ಆದರೂ ಕೆಲವು ಕಡೆಗಳಲ್ಲಿ ವಲಸೆ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಅನಕ್ಷರಸ್ಥರು, ಗರ್ಭಿಣಿಯರು ಹಾಗೂ ಮಕ್ಕಳು ಸೇರಿದಂತೆ ಹಲವು ಜನರು ಲಸಿಕೆಯನ್ನು ಪಡೆದುಕೊಂಡಿರುವುದಿಲ್ಲ. ಇಂಥವರನ್ನು ಗುರುತಿಸಿ ಲಸಿಕೆ ಕೊಡಿಸುವುದು ಸವಾಲಿನ ಕೆಲಸ. ಈ ವಿಷಯದಲ್ಲಿ ಜಿಲ್ಲೆಯ ಎಲ್ಲ ಆಶಾ ಕಾರ್ಯಕರ್ತೆಯರನ್ನು ಅಭಿನಂದಿಸುತ್ತೇವೆ ಎಂದರು.
ಇಂದ್ರಧನುಷ್ ಲಸಿಕಾ ಅಭಿಯಾನದ ಅಂಗವಾಗಿ ಜಿಲ್ಲೆಯಲ್ಲಿರುವ 7.18 ಲಕ್ಷ ಮನೆಗಳ ಸಮೀಕ್ಷೆ ನಡೆಸಲಾಗಿದ್ದು, 2 ವರ್ಷದೊಳಗಿನ 5,075 ಮಕ್ಕಳು, 2-5 ವರ್ಷದೊಳಗಿನ 432 ಮಕ್ಕಳು, 1,211 ಗರ್ಭಿಣಿಯರನ್ನು ಗುರುತಿಸಲಾಗಿದೆ. ಯಾರೂ ವ್ಯಾಕ್ಸಿನೇಷನ್‌ನಿಂದ ಹೊರಗುಳಿಯದಂತೆ ಕ್ರಮವಹಿಸಬೇಕು. ಜಿಲ್ಲೆಯಲ್ಲಿ 1,773 ಆಶಾ ಕಾರ್ಯಕರ್ತೆಯರು ಕಾರ್ಯನಿರ್ವಹಿಸುತ್ತಿದ್ದು, ಶೇ.100ರಷ್ಟು ವ್ಯಾಕ್ಸಿನೇಷನ್ ಅಭಿಯಾನ ಯಶಸ್ವಿಯಾಗುವಂತೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿ ಡಾ.ಪಿ.ಸಿ.ಕುಮಾರಸ್ವಾಮಿ ಮಾತನಾಡಿ, ತಾಯಿ ಮತ್ತು ಮಗುವಿನ ಗಂಭೀರ ಕಾಯಿಲೆಗಳ ವಿರುದ್ಧ ಹೋರಾಡುವ ರೋಗನಿರೋಧಕ ಶಕ್ತಿ ಮತ್ತು ರಕ್ಷಣೆ ನೀಡುವ ಸಲುವಾಗಿ ಈ ಮಹಾ ಅಭಿಯಾನ ನಡೆಯುತ್ತಿದೆ. ಲಸಿಕೆ ವಂಚಿತರಿಗೆ ಮೂರು ಸುತ್ತಿನಲ್ಲಿ ಲಸಿಕೆ ನೀಡುವ ಕಾರ್ಯಕ್ರಮ ನಡೆಯಲಿದ್ದು, ತಲಾ ಆರು ದಿನಗಳ ಕಾಲ ಲಸಿಕೆ ನೀಡಲಾಗುತ್ತದೆ. ಜಿಲ್ಲೆಯಲ್ಲಿ ಮೂರು ಹಂತದಲ್ಲಿ ಲಸಿಕೆ ನೀಡಲಾಗುತ್ತಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ನಗರಪಾಲಿಕೆ ಸಹಯೋಗದಲ್ಲಿ ಮನೆ-ಮನೆ ಸರ್ವೇ ಕಾರ್ಯ ನಡೆಸಿ ಯಾರು ಲಸಿಕೆಯಿಂದ ವಂಚಿತರಾಗಿದ್ದಾರೆ ಎನ್ನುವ ಮಾಹಿತಿ ಕಲೆ ಹಾಕಲಾಗಿದೆ. ಮಾಹಿತಿಗೆ ಅನುಗುಣವಾಗಿ ಲಸಿಕೆ ನೀಡುವ ಕಾರ್ಯ ಆರಂಭವಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಜಿಲ್ಲಾ ಶಸ್ತ್ರಚಿಕಿತ್ಸಕ ಅಮರ್‌ನಾಥ್ ಇತರರು ಇದ್ದರು.