ಆನ್‌ಲೈನ್ ಲಿಂಕ್ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ

10 HANUR 2
ಹನೂರು ಪೊಲೀಸ್ ಠಾಣೆಯಲ್ಲಿ ಆಯೋಜಿಸಿದ್ಧ ಎಸ್ಸಿ-ಎಸ್ಟಿ ಕುಂದು ಕೊರತೆ ಸಭೆಯಲ್ಲಿ ಇನ್ಸ್‌ಪೆಕ್ಟರ್ ಸಿ.ಆನಂದಮೂರ್ತಿ ಮಾತನಾಡಿದರು. ಗವಿಸಿದ್ದಯ್ಯ, ಭೋಜರಾಜು, ಸಂಪತ್‌ಕುಮಾರ್, ಕೆಂಪರಾಜು ಇತರರು ಇದ್ದರು.
Published on

ಹನೂರು: ಆನ್‌ಲೈನ್ ಲಿಂಕ್ ಮೂಲಕ ಹಣ ಕಳೆದುಕೊಂಡು ವಂಚನೆಗೊಳಗಾಗುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದ್ದು, ಪ್ರತಿಯೊಬ್ಬರೂ ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಇನ್ಸ್‌ಪೆಕ್ಟರ್ ಸಿ.ಆನಂದಮೂರ್ತಿ ತಿಳಿಸಿದರು.

ಪಟ್ಟಣ ಪೊಲೀಸ್ ಠಾಣೆಯಲ್ಲಿ ಭಾನುವಾರ ಆಯೋಜಿಸಿದ್ದ ಎಸ್ಸಿ-ಎಸ್ಟಿ ಸಮುದಾಯದ ಕುಂದುಕೊರತೆ ಸಭೆಯಲ್ಲಿ ಜನರ ಸಮಸ್ಯೆ ಆಲಿಸಿ ಮಾತನಾಡಿದರು. ಇತ್ತೀಚೆಗೆ ಮೊಬೈಲ್‌ಗಳಿಗೆ ಕೆಲವು ಆನ್‌ಲೈನ್ ಲಿಂಕ್‌ಗಳು ಬರುತ್ತಿದೆ. ಇದಕ್ಕೆ ಉತ್ತಮ ಸ್ಪಂದನೆ ನೀಡುವವರಿಂದ ಅಗತ್ಯ ಮಾಹಿತಿ ಪಡೆದು ಬ್ಯಾಂಕ್ ಖಾತೆಯಿಂದ ಹಣವನ್ನು ಲಪಾಟಾಯಿಸುತ್ತಿದ್ದು, ಜನರು ಮೋಸ ಹೋಗುತ್ತಿದ್ದಾರೆ. ಹಾಗೆಯೇ ಕೆಲವೊಂದು ಕಂಪನಿಗಳು ಲೋನ್ ನೀಡುತ್ತೇವೆಂದು ಕರೆ ಮಾಡಿ ಒತ್ತಡ ಹೇರಿ ಮಾಹಿತಿ ಪಡೆದು ಜನರನ್ನು ವಂಚಿಸಲಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ಈ ಬಗ್ಗೆ ಎಚ್ಚರ ವಹಿಸಬೇಕು. ಜತೆಗೆ ಗ್ರಾಮದ ಜನರಲ್ಲೂ ಈ ಬಗ್ಗೆ ಅರಿವು ಮೂಡಿಸಬೇಕು ಎಂದರು.

ಬ್ಯಾಂಕ್ ಖಾತೆಂಯಿಂದ ಹಣ ಕಸಿತವಾದರೆ ಕೂಡಲೇ ಹೆಲ್ಪ್‌ಲೈನ್ 1930ಗೆ ಕರೆ ಮಾಡಬೇಕು. ಇದರಿಂದ ವಂಚನೆಗೆ ಒಳಗಾಗುವುದನ್ನು ತಡೆಗಟ್ಟಬಹುದು. ಜತೆಗೆ ಯಾವುದೇ ಸಮಸ್ಯೆ ಇದ್ದಲ್ಲಿ 112ಗೆ ಕರೆ ಮಾಡುವುದರ ಮೂಲಕ ಪೊಲೀಸ್ ಸೇವೆಯನ್ನು ಪಡೆದು ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು. ಇನ್ನು ಚಾ.ನಗರ ಜಿಲ್ಲೆಯಲ್ಲಿ ಬಾಲ್ಯ ವಿವಾಹವನ್ನು ತೊಡೆದು ಹಾಕುವ ಸಲುವಾಗಿ ಜಿಲ್ಲೆಯನ್ನು ಬಾಲ್ಯ ವಿವಾಹಮುಕ್ತವೆಂದು ಘೋಷಿಸಲಾಗಿದೆ. ಆದ್ದರಿಂದ ಗ್ರಾಮಗಳಲ್ಲಿ ಬಾಲ್ಯ ವಿವಾಹ ಕಂಡು ಬಂದ ಕೂಡಲೇ 1098 ಅಥವಾ ಪೊಲೀಸ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಪಟ್ಟಣ ಪಂಚಾಯಿತಿ ಸದಸ್ಯ ಸಂಪತ್‌ಕುಮಾರ್ ಮಾತನಾಡಿ, ತಾಲೂಕಿನ ಬಹುತೇಕ ಗ್ರಾಮದ ಚಿಲ್ಲರೆ ಅಂಗಡಿಗಳಲ್ಲಿ ಬೆಳಗ್ಗೆಯಿಂದಲೇ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ಯುವಕರು ಹೆಚ್ಚು ಮದ್ಯ ಸೇವನೆ ಚಟಕ್ಕೆ ಒಳಗಾಗುತ್ತಿದ್ದಾರೆ. ಜತೆಗೆ ಗ್ರಾಮಗಳಲ್ಲಿ ಗಲಾಟೆಗೆ ಕಾರಣವಾಗುತ್ತಿದೆ. ಆದ್ದರಿಂದ ಅಕ್ರಮ ಮದ್ಯ ಮಾರಾಟವನ್ನು ತಡೆಗಟ್ಟಬೇಕು ಎಂದು ಮನವಿ ಮಾಡಿದರು.

ಈ ಹಿಂದೆ ಗ್ರಾಮದಲ್ಲಿ ಪೊಲೀಸ್ ಉಪ ಠಾಣೆ ಇತ್ತು. ಆದರೆ ಇದನ್ನು ಒಡೆಯರಪಾಳ್ಯಕ್ಕೆ ಸ್ಥಳಾಂತರಿಸಲಾಗಿದೆ. ಆದ್ದರಿಂದ ಗ್ರಾಮದಲ್ಲಿ ಶಾಂತಿ, ಸುವ್ಯವಸ್ಥೆಗೆ ನಿತ್ಯ ಅಗತ್ಯ ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕು ಎಂದು ಲೊಕ್ಕನಹಳ್ಳಿ ಗ್ರಾಮಸ್ಥರು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಇನ್ಸ್‌ಪೆಕ್ಟರ್ ಆನಂದಮೂರ್ತಿ, ಅಗತ್ಯ ಕ್ರಮವಹಿಸುವುದಾಗಿ ಭರವಸೆ ನೀಡಿದರು.

ಸಭೆಯಲ್ಲಿ ಎಎಸೈ ಶಿವಮೂರ್ತಿ, ಪ್ರೊಬೇಷನರಿ ಎಎಸೈ ಯಲ್ಲಪ್ಪ ವಾಲೇಕಾರ್, ಮುಖಂಡರಾದ ನೀಲನಾಯ್ಕ, ಭೋಜರಾಜು, ಕೆಂಪರಾಜು, ರಾಜೇಂದ್ರ, ಗವಿಸಿದ್ದಯ್ಯ, ಮಹಾದೇವ, ಸಿದ್ದರಾಜು, ಹುಚ್ಚಣ್ಣ, ಬಸವಲಿಂಗಸ್ವಾಮಿ, ಮಾದೇಶ್, ಕೃಷ್ಣಮೂರ್ತಿ ಇ ತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net