

ಮೈಸೂರು: ಮೈಸೂರು ಟ್ರಾವಲ್ಸ್ ಅಸೋಸಿಯೇಷನ್, ಸ್ಕಾಲ್ ಇಂಟರ್‌ನ್ಯಾಷನಲ್ ಮೈಸೂರು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸುವ ಮೂಲಕ ಶಿಕ್ಷಕರ ದಿನವನ್ನು ಗುರುವಾರ ಆಚರಿಸಲಾಯಿತು.
ನಗರದ ಭಾರತ್ ಇಂಟರ್‌ನ್ಯಾಷನಲ್ ಟ್ರಾವಲ್ಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಶಶಿಕಲಾ, ರಾಜು ಅವರನ್ನು ಸನ್ಮಾನಿಸಲಾಯಿತು. ಸ್ಕಾಲ್ ಇಂಟರ್‌ನ್ಯಾಷನಲ್ ಮೈಸೂರು ವಿಭಾಗದ ಅಧ್ಯಕ್ಷ ಸಿ.ಎ.ಜಯಕುಮಾರ್ ಮಾತನಾಡಿ, ಶಿಕ್ಷಕರು ಎಲ್ಲ ವೃತ್ತಿಗಳನ್ನೂ ರೂಪಿಸುವವರು. ನಮ್ಮ ಜೀವನದ ದಾರಿದೀಪದಂತಿರುವ ಶಿಕ್ಷಕರಿಗೆ ನಾವು ಎಷ್ಟು ಋಣಿಯಾಗಿದ್ದರೂ ಸಾಲದು ಎಂದು ಅಭಿಪ್ರಾಯಪಟ್ಟರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿಕ್ಷಕ ರಾಜು, ಜೀವನದಲ್ಲಿ ಶಿಸ್ತು, ಶ್ರದ್ಧೆ ಹಾಗೂ ಆಸಕ್ತಿ ಬಹಳ ಮುಖ್ಯ. ನಾನು ನಿವೃತ್ತಿಯಾಗಿ 27 ವರ್ಷಗಳು ಕಳೆದಿವೆ. ಶಿಸ್ತು, ಕೆಲಸದ ಮೇಲಿನ ಗೌರವ, ಸಮಯ ಪ್ರಜ್ಞೆ ಇಲ್ಲದೆ ನಾನು ಕೆಲಸ ಮಾಡಿದವನಲ್ಲ. ಜನರು ಬದುಕಿನಲ್ಲೂ ಶಿಸ್ತು ಅಳವಡಿಸಿಕೊಳ್ಳಬೇಕು ಎಂದರು.
ಸನ್ಮಾನ ಸ್ವೀಕರಿಸಿದ ನಂತರ ಶಶಿಕಲಾ ಮಾತನಾಡಿ, ನಾನು ನಿವೃತ್ತಳಾಗಿ ಎರಡು ವರ್ಷ ಕಳೆದಿದೆ. ಈಗಲೂ ಸ್ಕೌಟ್ಸ್ ಹಾಗೂ ಗೈಡ್ಸ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅದಕ್ಕೆ ಮಾತ್ರ ನಿವೃತ್ತಿ ಎಂಬುದಿಲ್ಲ. ಒಮ್ಮೆ ನಾನು ತರಬೇತಿ ನೀಡಿದ ನಂಜನಗೂಡು ಭಾಗದ ಗ್ರಾಮೀಣ ವಿದ್ಯಾರ್ಥಿಗಳು ರಾಜ್ಯಪಾಲರ ಬಳಿ ಬಹುಮಾನ ಪಡೆದಿದ್ದರು ಎಂದು ಹೇಳಿದರು.
ಭಾರತ್ ಇಂಟರ್‌ನ್ಯಾಷನಲ್ ಟ್ರಾವಲ್ಸ್‌ನ ಸಂಸ್ಥಾಪಕ ಮಹೇಂದ್ರ ಸಾಲಿಯಾನ್, ಮೈಸೂರು ಟ್ರಾವಲ್ಸ್ ಅಸೋಸಿಯೇಷನ್‌ನ ಅಧ್ಯಕ್ಷ ಬಿ.ಎಸ್.ಪ್ರಶಾಂತ್, ಪ್ರವಾಸಿ ಮಾರ್ಗದರ್ಶಕರ ಸಂಘದ ಅಧ್ಯಕ್ಷ ಎಸ್.ಜೆ.ಅಶೋಕ್ ಇನ್ನಿತರರಿದ್ದರು.