ಸಮಾಜದ ಋಣ ತೀರಿಸುವ ಹೊಣೆ ನನ್ನದು

h31-joshi
Published on

ಹುಬ್ಬಳ್ಳಿ: ನಾನು ಕೂಡ ಗ್ರಾಮೀಣ ಹಿನ್ನೆಲೆಯಿಂದ ಬಂದಿದ್ದೇನೆ. ಬಡತನದ ಪರಿಚಯವೂ ನನಗಿದೆ. ಉನ್ನತ ಸ್ಥಾನ ಸಿಕ್ಕ ಮೇಲೆ ಬಡವರ ಸೇವೆ ಮಾಡುವ ಸಂಕಲ್ಪ ಮಾಡಿದ್ದೇನೆ. ಅವರ ಋಣವನ್ನು ಈ ರೀತಿಯ ಆರೋಗ್ಯ ಶಿಬಿರಗಳ ಮೂಲಕ ತೀರಿಸಲು ಸಾಧ್ಯ ಎಂಬುದನ್ನು ಅರಿತಿದ್ದೇನೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಕ್ಷಮತಾ ಸೇವಾ ಸಂಸ್ಥೆ, ಕೆಎಲ್‌ಇ ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ, ಕೆಎಲ್‌ಇ ಆಸ್ಪತ್ರೆ ಹುಬ್ಬಳ್ಳಿ, ಕೆಎಲ್‌ಇ ಕೋ-ಆಪರೇಟೀವ್ ಆಸ್ಪತ್ರೆ, ಜಗದ್ಗುರು ಗಂಗಾಧರ ಮಹಾಸ್ವಾಮಿಗಳ ವೈದ್ಯಕೀಯ ಮಹಾವಿದ್ಯಾಲಯ ಆಶ್ರಯದಲ್ಲಿ ತಾಲೂಕಿನ ಬ್ಯಾಹಟ್ಟಿಯ ಸರ್ಕಾರಿ ಪ್ರಾಥಮಿಕ ಕನ್ನಡ ಗಂಡು/ಹೆಣ್ಣು ಮಕ್ಕಳ ಶಾಲೆ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ 20 ವರ್ಷಗಳಿಂದ ಕ್ಷಮತಾ ಸೇವಾ ಸಂಸ್ಥೆಯಿಂದ ಇಂತಹ ಆರೋಗ್ಯ ಶಿಬಿರ ಏರ್ಪಡಿಸಲಾಗುತ್ತಿದೆ. ಗ್ರಾಮೀಣ ಭಾಗದ ಸಾಮಾನ್ಯ ಜನರು ದೂರದ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಲಾಗದ ಸ್ಥಿತಿಯಲ್ಲಿದ್ದಾರೆ. ಇಂತಹ ಆರೋಗ್ಯ ತಪಾಸಣಾ ಶಿಬಿರಗಳಿಂದ ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಲು ಸಾಧ್ಯ ಎಂದರು.
ಮನ್ ಕೀ ಬಾತ್ ವೀಕ್ಷಣೆ:
ಇದೇ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ಕಾರ್ಯಕ್ರಮದ 108ನೇ ಆವೃತ್ತಿಯನ್ನು ಬ್ಯಾಹಟ್ಟಿ ಗ್ರಾಮದ ಸ್ಥಳೀಯರೊಂದಿಗೆ ಕುಳಿತು ವೀಕ್ಷಿಸಿದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪರಮೇಶ್ವರ ಯಡ್ರಾವಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬ್ಯಾಹಟ್ಟಿಯ ಹಿರೇಮಠದ ಶ್ರೀ ಶಿವಾಚಾರ್ಯ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. 850 ಜನರು ಶಿಬಿರದ ಸದುಪಯೋಗಪಡೆದುಕೊಂಡರು. ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಕೆಎಲ್‌ಇ ಸಂಸ್ಥೆ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ, ಗ್ರಾಪಂ ಅಧ್ಯಕ್ಷೆ ಮಹಾದೇವಿ ಹಂಗರಕಿ, ಪ್ರಮುಖರಾದ ಮೃತ್ಯುಂಜಯ ಹಿರೇಮಠ, ಮಧು ಹುಬ್ಬಳ್ಳಿ, ಮಹಾದೇವಿ ಗಿಡ್ನವರ, ಶಿವಾನಂದ ನವಲೂರ, ಉಮೇಶ ಹುರಕಡ್ಲಿ, ಕಲ್ಲನಗೌಡ ಪಾಟೀಲ, ನವೀನ ಆಕಳವಾಡಿ ಇತರರು ಇದ್ದರು.
ಶಾಲಾ ಕೊಠಡಿ ಉದ್ಘಾಟನೆ: ಕೋಲ್ ಇಂಡಿಯಾ ಲಿಮಿಟೆಡ್‌ನ ಸಿಎಸ್‌ಆರ್ ಕಾರ್ಯಚಟುವಟಿಕೆ ಅಡಿ ನಿರ್ಮಿಸಲಾದ 18 ಲಕ್ಷ ರೂ. ವೆಚ್ಚದ ನೂತನ ಶಾಲಾ ಕೊಠಡಿಯನ್ನು ಸಚಿವ ಪ್ರಲ್ಹಾದ ಜೋಶಿ ಅವರು ಉದ್ಘಾಟಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net