

ಲಕ್ಷ್ಮೇಶ್ವರ: ಕೃಷಿ ಪರಿಕರ ಮಾರಾಟಗಾರರು ಕಡ್ಡಾಯವಾಗಿ ಅಂಗಡಿಗಳಲ್ಲಿ ಗೊಬ್ಬರದ ದಾಸ್ತಾನು, ದರಪಟ್ಟಿ ಪ್ರಕಟಿಸಬೇಕು ಮತ್ತು ರೈತರು ಖರೀದಿಸಿದ ರಸಗೊಬ್ಬರ, ಬೀಜ, ಕ್ರಿಮಿನಾಶಕ ಇತರ ಕೃಷಿ ಸಾಮಗ್ರಿಗಳಿಗೆ ಕಡ್ಡಾಯವಾಗಿ ರಸೀದಿ ಕೊಡಬೇಕು ಎಂದು ತಹಸೀಲ್ದಾರ್ ವಾಸುದೇವ ಎಂ ಸ್ವಾಮಿ ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಕೃಷಿ ಇಲಾಖೆ ವತಿಯಿಂದ ಬುಧವಾರ ತಾಲೂಕಿನ ಕೃಷಿ ಪರಿಕರ ಮಾರಾಟಗಾರರ ಗುಣ ನಿಯಂತ್ರಣದ ಬಗ್ಗೆ ತಿಳಿವಳಿಕೆ ಮತ್ತು ಕೈಗೊಳ್ಳಬೇಕಾದ ಕ್ರಮಗಳ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಹಾಯಕ ಕೃಷಿ ನಿರ್ದೇಶಕ (ಜಾರಿದಳ) ರಾಘವೇಂದ್ರ ಬೊಮ್ಮಿಗಟ್ಟಿ ಮಾತನಾಡಿ, ಈ ಬಾರಿ ಹಿಂಗಾರು ಹಂಗಾಮಿನಲ್ಲಿ ಕೊಂಚ ತಡವಾದರೂ ಉತ್ತಮ ಮಳೆಯಾಗಿದೆ. ತಾಲೂಕಿನಲ್ಲಿ ಹಿಂಗಾರು ಹಂಗಾಮಿಗೆ 33 ಸಾವಿರ ಹೆಕ್ಟೇರ್ ಕ್ಷೇತ್ರದಲ್ಲಿ ಬಿತ್ತನೆಯಾಗಲಿದ್ದು ಅದರಲ್ಲಿ ಶೇ.90 ರಷ್ಟು ಕ್ಷೇತ್ರದಲ್ಲಿ ಕಡಲೆ ಒಳಗೊಂಡಿದೆ. ಈಗಾಗಲೇ ಕೆಲ ರೈತರು ಬೀಜ, ಗೊಬ್ಬರ ಖರೀದಿಸಿದ್ದಾರೆ. ಉತ್ತಮ ಮಳೆಯಾಗಿದ್ದರಿಂದ ರಸಗೊಬ್ಬರದ ಬೇಡಿಕೆ ಹೆಚ್ಚಲಿದೆ. ರೈತರಿಗೆ ಡಿಎಪಿ ಗೊಬ್ಬರದ ಬದಲಾಗಿ ಸಾರಜನಕ, ರಂಜಕ, ಪೋಟ್ಯಾಸ್ಯುುಕ್ತ ಕಾಂಪ್ಲೆಕ್ಸ್ ಗೊಬ್ಬರ ಬಳಸುವಂತೆ ಮನವರಿಕೆ ಮಾಡಿಕೊಡಬೇಕು. ಮಾರಾಟಗಾರರು ಗೌಪ್ಯವಾಗಿ ರಸಗೊಬ್ಬರ ಸಂಗ್ರಹಿಸಿ, ಹೆಚ್ಚಿನ ದರಗಳಲ್ಲಿ ಮಾರಿದ ಮಾಹಿತಿ ಬಂದರೆ ಕ್ರಮ ಕೈಗೊಳ್ಳಲಾಗುವುದು. ಅಧಿಕೃತ ಡೀಲರ್ಗಳಿಂದ ಬೀಜ, ಗೊಬ್ಬರ ಖರೀದಿಸಿ ನಿಗದಿತ ದರದಲ್ಲಿ ಮಾರಾಟ ಮಾಡಬೇಕು ಎಂದರು.
ತಾಪಂ ಇಒ ಕೃಷ್ಣಪ್ಪ ಧರ್ಮರ, ತಾಲೂಕು ಸಹಾಯಕ ಕೃಷಿ ನಿರ್ದೇಶಕ ರೇವಣಪ್ಪ ಬಿಸನಳ್ಳಿ, ಕೃಷಿ ಅಧಿಕಾರಿ ಚಂದ್ರಶೇಖರ ನರಸಮ್ಮನವರ, ಕೃಷಿ ಮಾರಾಟಗಾರರ ಸಂಘದ ಅಧ್ಯಕ್ಷ ಅಶೋಕ ಬಟಗುರ್ಕಿ ಇತರರು ಇದ್ದರು. ಸಭೆಯ ಬಳಿಕ ಕೃಷಿ ಪರಿಕರ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸಲಹೆ-ಸೂಚನೆ ನೀಡಲಾಯಿತು.