

ಹನೂರು: ವಿವಿಧ ಯೋಜನೆಯಡಿ ಬಾಕಿ ಉಳಿದಿರುವ ಅನುದಾನಕ್ಕೆ ಮರು ಕ್ರಿಯಾಯೋಜನೆಯನ್ನು ತಯಾರಿಸಿ ಅನುಮೋದನೆ ಪಡೆದು ಮೂರು ತಿಂಗಳೊಳಗೆ ಅಭಿವೃದ್ಧಿ ಕಾರ್ಯಗಳ ಬಳಕೆಗೆ ಅಗತ್ಯ ಕ್ರಮವಹಿಸಲಾಗುವುದು ಎಂದು ಮುಖ್ಯಾಧಿಕಾರಿ ಎಂ.ಪಿ.ಮಹೇಶ್‌ಕುಮಾರ್ ಹೇಳಿದರು.
ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ಅಧ್ಯಕ್ಷೆ ಮುಮ್ತಾಜ್‌ಬಾನು ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ವಿಶೇಷ ಸಭೆಯಲ್ಲಿ ಸದಸ್ಯರಿಂದ ಮಾಹಿತಿ ಪಡೆದು ಮಾತನಾಡಿದರು.
ಅಂಗವಿಕಲರ ಅಭ್ಯುದಯಕ್ಕೆ ಪಪಂನಲ್ಲಿ ಅನುದಾನ ಮೀಸಲಿರುತ್ತದೆ. ಆದರೆ ಕಳೆದ ನಾಲ್ಕೈದು ವರ್ಷಗಳಿಂದ ಬಳಸದಿರುವುದು ಹಾಗೂ ವಿವಿಧ ಯೋಜನೆಯಡಿ ಕೆಲವು ಅನುದಾನ ಅಭಿವೃದ್ಧಿ ಕಾರ್ಯಗಳಿಗೆ ಬಳಕೆಯಾಗದಿರುವುದು ನಿಜಕ್ಕೂ ವಿಪರ್ಯಾಸ. ಆದ್ದರಿಂದ ಈ ಬಗ್ಗೆ ಅಗತ್ಯ ಕ್ರಮವಹಿಸಿ 3 ತಿಂಗಳೊಳಗೆ ಅನುದಾನವನ್ನು ಆಯಾ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳಲಾಗುವುದು. ಯಾವುದೇ ಅನುದಾನ ಸರ್ಕಾರಕ್ಕೆ ವಾಪಾಸ್ ಆಗದಂತೆ ಅಗತ್ಯ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ಜನರೇಟರ್ ಒದಗಿಸಿ: ಸದಸ್ಯರಾದ ಮಹೇಶ್ ಹಾಗೂ ಸಂಪತ್‌ಕುಮಾರ್ ಮಾತನಾಡಿ, ಪಟ್ಟಣದ ಡಾ. ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಡತನಕ್ಕೆ ಸೇರಿದ ಜನರೇ ವಿವಾಹವಾಗುತ್ತಿದ್ದಾರೆ. ಆದರೆ ವಿದ್ಯುತ್ ಕಡಿತಗೊಂಡ ವೇಳೆ ಶುಭ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ. ಆದ್ದರಿಂದ ಈ ಸಾಲಿನಲ್ಲಿ ಎಸ್ಸಿ ವರ್ಗದ ಕಲ್ಯಾಣಕ್ಕೆ ಮೀಸಲಿರುವ 4 ಲಕ್ಷ ರೂ.ಅನುದಾನದಲ್ಲಿ ಭವನಕ್ಕೆ ಜನರೇಟರ್ ಸೌಕರ್ಯ ಒದಗಿಸುವಂತೆ ಮನವಿ ಮಾಡಿದರು. ಇದಕ್ಕೆ ಅಗತ್ಯ ಕ್ರಮವಹಿಸುವಂತೆ ಇಂಜಿನಿಯರ್ ನಾಗರಾಜು ಅವರಿಗೆ ಸೂಚಿಸಿದರು.
ಸಂಬಂಧಪಟ್ಟವರ ವಿರುದ್ಧ ಶಿಸ್ತುಕ್ರಮ: ಸಭೆಯಲ್ಲಿ ಕಟ್ಟಡಗಳಿಗೆ ಪರವಾನಿಗೆ ನೀಡುವ ವಿಚಾರದಲ್ಲಿ ಇಲ್ಲಿನ ನೌಕರರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇದರಿಂದ ಗೊಂದಲಕ್ಕೆ ಎಡೆಮಾಡಿಕೊಡುತ್ತಿದೆ. ಆದ್ದರಿಂದ ಈ ಬಗ್ಗೆ ಕಠಿಣ ಕ್ರಮವಾಗಬೇಕು ಎಂದು ಸದಸ್ಯರೆಲ್ಲರೂ ಒಕ್ಕೊರಲಿನಿಂದ ಒತ್ತಾಯಿಸಿದರು. ಈ ವೇಳೆ ಮುಖ್ಯಾಧಿಕಾರಿ ಮಾತನಾಡಿ, ಲೈಸೆನ್ಸ್ ನೀಡುವ ವಿಚಾರದಲ್ಲಿ ವಿಷಯವಾರು ನೌಕರರು ಸಲ್ಲಿಕೆಯಾದ ಅರ್ಜಿ ಹಾಗೂ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕು ಹಾಗೂ ಸ್ಥಳಕ್ಕೆ ತೆರಳಿ ಪರಿಶೀಲಿಸಿದ ಬಳಿಕ ಹಿಂಬರಹ ನೀಡಬೇಕು. ದೋಷ ರಹಿತ ದಾಖಲೆಯಿಂದ ಕೂಡಿದ್ದರೆ ಯಾವುದೇ ಕಾರಣಕ್ಕೂ ಲೈಸೆನ್ಸ್ ನೀಡಕೂಡದು. ಒಂದು ವೇಳೆ ಅರ್ಜಿದಾರರಿಂದ ಶುಲ್ಕ ಪಡೆದು ಜನರಿಂದ ದೂರು ಬಂದರೆ ಸಂಬಂಧಪಟ್ಟವರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಅನುಮೋದನೆಗೊಂಡ ವಿಚಾರಗಳು: ಸಭೆಯಲ್ಲಿ 11.50 ಲಕ್ಷ ರೂ ವೆಚ್ಚದಲ್ಲಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ಶೌಚಗೃಹ ನಿರ್ಮಾಣ, 2021-22ನೇ ಸಾಲಿನ 15ನೇ ಹಣಕಾಸು ಯೋಜನೆಯಡಿ ನಾನ್ ಮಿಲಿನಿಯಂ ಪ್ಲಸ್ ಅನುದಾನದಲ್ಲಿ 20 ಲಕ್ಷ ರೂ.ವೆಚ್ಚ ಹಾಗೂ 2025-26ನೇ ಸಾಲಿನ ಎಸ್‌ಎಫ್‌ಸಿ ಯೋಜನೆಯ 10 ಲಕ್ಷ ರೂ.ಅನುದಾನದಲ್ಲಿ ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ ಕ್ರಿಯಾಯೋಜನೆ ತಯಾರಿಸುವ ಸಂಬಂಧ ಅನುಮೋದನೆ ಪಡೆಯಲಾಯಿತು.
ಇದೇ ವೇಳೆ ಅಂಗವಿಕರಿಗೆ ಮೀಸಲಿರಿಸುವ ಅನುದಾನ 2019ರಿಂದಲೂ ಬಳಕೆಯಾಗುತ್ತಿಲ್ಲ. ಇದರಿಂದ ಅಂಗವಿಕಲರು ಸವಲತ್ತಿನಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಸವಲತ್ತನ್ನು ಒದಗಿಸಬೇಕು ಎಂದು ಸದಸ್ಯರ ಮನವಿಗೆ ಮುಖ್ಯಾಧಿಕಾರಿ ಪ್ರತಿಕ್ರಿಯಿಸಿ ಅಗತ್ಯ ಕ್ರಮವಹಿಸಲಾಗುವುದು. ಜತೆಗೆ ಸಭೆಯಲ್ಲಿ ತಿಳಿಸಿದ ಸಮಸ್ಯೆಗಳನ್ನು ಬಗೆಹರಿಸಲಾಗುವುದು. ಇದಕ್ಕೆ ತಮ್ಮೆಲ್ಲರ ಸಹಕಾರ ಅಗತ್ಯ ಎಂದು ತಿಳಿಸಿದರು.
ಉಪಾಧ್ಯಕ್ಷ ಆನಂದ್, ಸದಸ್ಯರಾದ ಪವಿತ್ರಾ, ಮಂಜುಳಾ, ಸೋಮಶೇಖರ್, ಮಹೇಶ್‌ನಾಯ್ಕ, ಸುದೇಶ್, ಸಮುದಾಯ ಸಂಘಟನಾಧಿಕಾರಿ ಚಂದ್ರಕುಮಾರ್, ನೌಕರರಾದ ಪ್ರಕಾಶ್, ಭರತ್, ಪರಶಿವಮೂರ್ತಿ, ಪ್ರದೀಪ್, ಪ್ರತಾಪ್ ಇತರರು ಇದ್ದರು.