

ಬಾಳೆಹೊನ್ನೂರು: ಮಾನವನ ವ್ಯಕ್ತಿತ್ವಕ್ಕೆ ಯಾರಿಂದಲೂ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಜೇಸಿಐ ಸ್ಥಾಪಕ ಅಧ್ಯಕ್ಷ ಸೈಯ್ಯದ್ ಾಜಿಲ್ ಹುಸೇನ್ ಹೇಳಿದರು.
ಪಟ್ಟಣದ ಜೇಸಿ ಭವನದಲ್ಲಿ ಜೇಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆ ಸೋಮವಾರ ಆಯೋಜಿಸಿದ್ದ ಜೇಸಿ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಒಂದೊಂದು ವಿಶಿಷ್ಟ ವ್ಯಕ್ತಿತ್ವಗಳಿದ್ದು, ಅವುಗಳಿಗೆ ಅದರದ್ದೇ ಆದ ಮೌಲ್ಯಗಳಿರುತ್ತವೆ. ಅದಕ್ಕೆ ಯಾರಿಂದಲೂ ಬೆಲೆ ಕಟ್ಟಲು ಸಾಧ್ಯವಿಲ್ಲ. ಸ್ವತಃ ಅವರುಗಳೇ ಅವರ ಮೌಲ್ಯ ನಿರ್ಧರಿಸಿಕೊಳ್ಳಬೇಕಿದೆ ಎಂದರು.
ಜೇಸಿ ಸಂಸ್ಥೆ ಯುವ ಜನರಲ್ಲಿ ವ್ಯಕ್ತಿತ್ವ ವಿಕಸನ ಮೂಡಿಸಲಿದ್ದು, ಜೇಸಿ ಸಂಸ್ಥೆಯಲ್ಲಿ ಸದಸ್ಯರಾಗುವ ಮೂಲಕ ಸದಸ್ಯರು ಸಕ್ರಿಯವಾಗಿ ವಿವಿಧ ತರಬೇತಿ ಪಡೆದು ತಮ್ಮ ಮೌಲ್ಯ ಹೆಚ್ಚಿಸಿಕೊಳ್ಳಬೇಕಿದೆ ಎಂದರು.
ಜೇಸಿಐ ಪೂರ್ವಾಧ್ಯಕ್ಷ ಸತೀಶ್ ಅರಳೀಕೊಪ್ಪ ಮಾತನಾಡಿ, ಬಾಳೆಹೊನ್ನೂರು ಪಟ್ಟಣದಲ್ಲಿ 2002ರಲ್ಲಿ ಆರಂಭಗೊಂಡ ಜೇಸಿ ಸಂಸ್ಥೆ ವಿಶಿಷ್ಟ ಕಾರ್ಯ ಚಟುವಟಿಕೆಗಳ ಮೂಲಕ ಸಮಾಜದಲ್ಲಿ ಗಮನಸೆಳೆದಿದೆ. ಯುವಜನರನ್ನು ಸಮಾಜದ ಮುಖ್ಯವಾಹಿನಿಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಣೆ ನೀಡುತ್ತಿದೆ ಎಂದರು.
ಜೇಸಿ ಅಧ್ಯಕ್ಷ ಎನ್.ಶಶಿಧರ್ ಮಾತನಾಡಿ, ಜೇಸಿ ಸಂಸ್ಥೆ ಯುವಜನರ ವ್ಯಕ್ತಿತ್ವ ವಿಕಸನದೊಂದಿಗೆ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿದೆ. ಸಮಾಜದಲ್ಲಿ ಆರೋಗ್ಯ, ಶಿಕ್ಷಣ, ಕ್ರೀಡೆ, ಕಲೆ, ಸಂಸ್ಕೃತಿ, ಸಾಹಿತ್ಯ ಸೇರಿದಂತೆ ವಿವಿಧ ಕ್ಷೇತ್ರದಲ್ಲಿಯೂ ನಿರಂತರವಾಗಿ ತೊಡಗಿಕೊಂಡು ಕಾರ್ಯಕ್ರಮ ಮಾಡುವ ಮೂಲಕ ಸಕ್ರಿಯವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದೆ ಎಂದು ತಿಳಿಸಿದರು.