

ಮೈಸೂರು: ಜೀವನದಲ್ಲಿ ಯಾರಾದರೂ ಏಳಿಗೆ ಕಂಡಿಲ್ಲ ಎಂದರೆ ಅವರು ಯಾವುದಾದರೊಂದು ದುಶ್ಚಟಗಳಿಗೆ ಬಲಿಯಾಗಿರುತ್ತಾರೆ ಎನ್ನುವ ಮಾತಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಹಾರಾಜ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮ ಕುರಿತ ವಿಚಾರಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ನಮಗೆ ಗೌರವ ಸಿಗಬೇಕೆಂದರೆ ಶುಭ್ರವಾಗಿ ಬದುಕಬೇಕು ಹಾಗೂ ದೇಹವನ್ನು ಶುಚಿಯಾಗಿಟ್ಟುಕೊಳ್ಳಬೇಕು. ಜೀವನದಲ್ಲಿ ಯಾರಾದರೂ ಏಳಿಗೆ ಕಂಡಿಲ್ಲ ಎಂದರೆ ಅವರು ಯಾವುದಾದರೊಂದು ದುಶ್ಚಟಗಳಿಗೆ ಬಲಿಯಾಗಿರುತ್ತಾರೆ. ಅಂತಹವರಿಗೆ ಸಮಾಜದಲ್ಲಿ ಯಾವುದೇ ರೀತಿಯ ಗೌರವ ಸಿಗುವುದಿಲ್ಲ ಎಂದರು.
ಕಾಲೇಜು ಹಂತಗಳಲ್ಲಿ ವಿದ್ಯಾರ್ಥಿಗಳು ಯಾವ ಸಾಧನೆಯನ್ನಾದರೂ ಮಾಡುವ ಉತ್ಸಾಹದಲ್ಲಿರುತ್ತಾರೆ. ಹೀಗಾಗಿ ಸಾಧನೆಯ ಕಡೆ ಹೆಚ್ಚಿನ ಗಮನ ನೀಡಬೇಕು. ದುಶ್ಚಟಗಳಿಂದ ದೂರವಿರಬೇಕು ಎಂದು ಹೇಳಿದರು.
ಟಿವಿ, ಮೊಬೈಲ್ಗಳಿಗೆ ದಾಸರಾದರೆ ಮನೋರೋಗ ತಜ್ಞರ ಸಹಾಯದಿಂದ ಹೊರಬರಬಹುದು. ಆದರೆ ಸಿಗರೇಟ್, ಗಾಂಜಾದಂತಹ ದುಶ್ಚಟಗಳು ರಕ್ತದಲ್ಲಿ ಬೆರೆತು ಹೋದರೆ ಅದರಿಂದ ಹೊರಬರಲು ಬಹಳ ಕಠಿಣ ಎಂದು ಎಚ್ಚರಿಸಿದರು.
ವಿದ್ಯಾರ್ಥಿಗಳು ಚಲನಚಿತ್ರದಲ್ಲಿ ಬರುವ ಹೀರೋಗಳನ್ನು ಅನುಕರಣೆ ಮಾಡಬಾರದು. ಇದರಿಂದ ನಮ್ಮ ದೇಹ ಹಾಗೂ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರುತ್ತದೆ. ನಮಗೆ ನಾವೇ ಹೀರೋಗಳಾಗಬೇಕು. ಇತರರಿಗೆ ಮಾದರಿಯಾಗಬೇಕು ಎಂದು ತಿಳಿಸಿದರು.
ಪತ್ರಕರ್ತ ಸಿ.ಕೆ.ಮಹೇಂದ್ರ ಮಾತನಾಡಿ, ಯುವ ಮನಸ್ಸುಗಳು ವಿವಿಧ ಆಕರ್ಷಣೆಗೆ ಒಳಗಾಗುತ್ತದೆ. ಹಾಗಾಗಿ, ಅಂತಹ ವಯಸ್ಸಿನಲ್ಲಿ ಮನಸ್ಸು ನಿಗ್ರಹ ಮುಖ್ಯ. ಇಂತಹ ಜಾಗೃತಿ ಕಾರ್ಯಕ್ರಮ ಎಲ್ಲ ಶಾಲೆ, ಕಾಲೇಜುಗಳಲ್ಲಿ ಆಯೋಜಿಸಬೇಕು ಎಂದರು.
ಶಾಲಾ, ಕಾಲೇಜು ಹಂತದಲ್ಲೇ ವಿದ್ಯಾರ್ಥಿಗಳಿಗೆ ಪಾಕೆಟ್‌ಮನಿ ಸಿಗುತ್ತದೆ. ಇದರಿಂದ ಅವರಿಗೆ ವಿವಿಧ ಆಕರ್ಷಣೆಗೆ ಒಳಗಾಗುವ ಹಂತದಲ್ಲಿರುತ್ತಾರೆ. ಈ ವಯಸ್ಸಿನಲ್ಲಿಯೇ ಏನು ಬೇಕಾದರೂ ಕಲಿಯಬಹುದು. ಯಾವ ಸಾಧನೆಯನ್ನಾದರೂ ಮಾಡಬಹುದು ಎಂದರು.
ಮನೋರೋಗ ತಜ್ಞ ಡಾ.ಬಿ.ಎನ್.ರವೀಶ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ತಾಳ್ಮೆ ಹಾಗೂ ಶ್ರದ್ಧೆ ಕಾಣುತ್ತಿಲ್ಲ. ಇವೆರಡು ಇಲ್ಲ ಎಂದರೆ ಉತ್ತಮ ಆರೋಗ್ಯ ಪಡೆಯಲು ಸಾಧ್ಯವಿಲ್ಲ. ನಮ್ಮ ಬದುಕಿಗೆ ನಾವೆ ಶಿಲ್ಪಿಗಳಾಗಬೇಕು. ಎಂದಿಗೂ ಕೀಳರಮೆ ಇಟ್ಟುಕೊಳ್ಳಬೇಡಿ. ಜೀವನ ಸಂತೋಷದ ಕ್ಷಣಗಳನ್ನು ಅನುಭವಿಸುವುದಕ್ಕೆ ಇರಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ಹೋಟೆಲ್ ಊಟದ ಸೇವನೆ ಹೆಚ್ಚಾಗುತ್ತಿದೆ. ಇದು ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹೀಗಾಗಿ ಮನೆಯಲ್ಲೇ ತಯಾರಿಸ ಊಟವನ್ನು ಸೇವಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ನಾಗರಾಜು, ಮಹಾರಾಜ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಉದಯಶಂಕರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಟಿ.ಕೆ.ಹರೀಶ್, ತಂಬಾಕು ವಿರೋಧಿ ವೇದಿಕೆ ಸಂಚಾಲಕ ವಸಂತಕುಮಾರ್ ಮೈಸೂರು ಮಠ್, ವಾರ್ತಾ ಇಲಾಖೆಯ ವಾರ್ತಾ ಸಹಾಯಕರಾದ ರಮೇಶ್, ಮಹಾರಾಣಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರೊ.ಗೋವಿಂದರಾಜು ಇತರರು ಇದ್ದರು.