ಐವನ್ ವಿರುದ್ದ ಕ್ರಮಕ್ಕೆ ಬಿಜೆಪಿ ಆಗ್ರಹ, ಸುಮೋಟೊ ಪ್ರಕರಣ ದಾಖಲಿಸಲು ಅಸಾಧ್ಯ- ಪೊಲೀಸ್ ಆಯುಕ್ತರ ಸ್ಪಷ್ಠನೆ

mng_19 aug BJP manavi
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ವಿರುದ್ದ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಬೇಕು ಎಂದು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ನಿಯೋಗ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಸೋಮವಾರ ಸಂಜೆ ಮನವಿ ಸಲ್ಲಿಸಿದೆ.
Published on

ಮಂಗಳೂರು: ಕಾಂಗ್ರೆಸ್ ಪಕ್ಷ ನಗರದಲ್ಲಿ ಸೋಮವಾರ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ರಾಜ್ಯಪಾಲರ ವಿರುದ್ಧ ಪ್ರಚೋದನಾಕಾರಿಯಾಗಿ ಭಾಷಣ ಮಾಡಿ, ದೇಶದ ಸಮಗ್ರತೆಗೆ ಧಕ್ಕೆಯಾಗುವಂತೆ ಮತ್ತು ಸಂವಿಧಾನ ವಿರೋಧಿ ಹೇಳಿಕೆಯನ್ನು ನೀಡಿ, ದಂಗೆ ಎಬ್ಬಿಸಲು ಪ್ರೇರೇಪಿಸಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ವಿರುದ್ದ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಬೇಕು ಎಂದು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ನಿಯೋಗ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಸೋಮವಾರ ಸಂಜೆ ಮನವಿ ಸಲ್ಲಿಸಿದೆ.

ಮುಖ್ಯಮಂತ್ರಿ ವಿರುದ್ಧದ ಮುಡಾ ಹಗರಣ ಆರೋಪಕ್ಕೆ ಸಂಬಂಧಿಸಿ ರಾಜ್ಯಪಾಲರು ತನಿಖೆ ನಡೆಸಲು ಅನುಮತಿ ನೀಡಿರುವುದನ್ನು ಖಂಡಿಸುವ ವೇಳೆ ಐವನ್ ಡಿಸೋಜ ಅವರು ‘ರಾಜ್ಯಪಾಲರನ್ನು ರಾಷ್ಟ್ರಪತಿ ಅವರು ವಾಪಸ್ ಕರೆಸಿಕೊಳ್ಳಬೇಕು. ಇಲ್ಲವಾದಲ್ಲಿ ಬಾಂಗ್ಲಾದೇಶದ ಪ್ರಧಾನಿ ರಾತ್ರೋರಾತ್ರಿ ಓಡಿ ಹೋದಂತೆ ಇಲ್ಲಿಯೂ ಕೂಡ ರಾಜ್ಯಪಾಲರು ರಾತ್ರೋರಾತ್ರಿ ಓಡಿಹೋಗುವಂತೆ ಮಾಡುತ್ತೇವೆ. ಗವರ್ನರ್‌ಆಫೀಸ್ ಚಲೋ ನಡೆಸಿ ರಾಜ್ಯಪಾಲರನ್ನು ಓಡಿಸುತ್ತೇವೆ’ ಎಂದು ಹೇಳಿಕೆ ನೀಡಿದ್ದಾರೆ.

ಐವನ್ ಅವರ ಸಂವಿಧಾನ ಬಾಹಿರ, ಉದ್ರೇಕಕಾರಿ ಭಾಷಣದ ಬಳಿಕ ಚಲಿಸುತ್ತಿದ್ದ ಬಸ್ ಹಾಗೂ ಸಾರ್ವಜನಿಕ ಸ್ವತ್ತುಗಳಿಗೆ ಕಲ್ಲು ತೂರಾಟ ನಡೆಸಿ ಗಲಭೆ ಎಬ್ಬಿಸಲಾಗಿದೆ. ಈ ಹಿನ್ನೆಲೆಯಲ್ಲಿ ಐವನ್ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಮನವಿ ನೀಡಿದ ನಿಯೋಗದಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಡಾ.ವೈ. ಭರತ್ ಶೆಟ್ಟಿ, ಮೇಯರ್ ಸುಧೀರ್‌ರ್ ಶೆಟ್ಟಿ ಕಣ್ಣೂರು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ, ಯತೀಶ್ ಆರ್ವಾರ್, ಕಿಶೋರ್ ಬೊಟ್ಯಾಡಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷ ಮಂಜುಳಾ ರಾವ್, ಯುವಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ, ಪ್ರಮುಖರಾದ ಪೂಜಾ ಪೈ, ರಮೇಶ್ ಕಂಡೆಟ್ಟು, ಭರತ್‌ರಾಜ್ ಕೃಷ್ಣಾಪುರ ಉಪಸ್ಥಿತರಿದ್ದರು.

-----------------

ಸುಮೋಟೊ ಪ್ರಕರಣ ದಾಖಲಿಸಲು ಅಸಾಧ್ಯ

ಕಾಂಗ್ರೆಸ್ ಪಕ್ಷ ನಗರದಲ್ಲಿ ನಡೆಸಿದ ಪ್ರತಿಭಟನೆ ವೇಳೆ ಪ್ರಚೋದನಕಾರಿ ಭಾಷಣ ಹಿನ್ನೆಲೆಯಲ್ಲಿ ಐವನ್ ಡಿಸೋಜ ವಿರುದ್ಧ ಸುಮೋಟೊ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ. ಕಲ್ಲು ತೂರಾಟ ನಡೆಸಿದ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮನವಿ ಸ್ವೀಕರಿಸಿದ ನಗರ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net