

ಶಿವಮೊಗ್ಗ: ಕಾಂಗ್ರೆಸ್ ಮುಖಂಡರಿಂದ ಸಂವಿಧಾನದ ಗೌರವವನ್ನು ನೀರಿಕ್ಷಿಸಲು ಸಾಧ್ಯವಿಲ್ಲ. ಸುಳ್ಳು ಅಪಪ್ರಚಾರ ಮಾಡಿ ಜನರ ಸಿಂಪತಿ ಗಿಟ್ಟಿಸಲು ಹೊರಟಿದ್ದಾರೆ. ಚುನಾವಣಾ ಆಯೋಗದ ಅಕ್ರಮದ ಬಗ್ಗೆ ಮಾತಾಡುವುದಕ್ಕೆ ಅವರಿಗೆ ನಾಚಿಕೆ ಆಗಬೇಕು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಅಕ್ರಮ ಆರೋಪವನ್ನು ಕಾಂಗ್ರೆಸ್ ಮಾಡಿದೆ. ಲೋಕಸಭೆ ಪ್ರತಿಪಕ್ಷದ ನಾಯಕರು ರಾಹುಲ್ ಗಾಂಧಿ ಅವರು ಬೆಂಗಳೂರಿಗೆ ಆಗಮಿಸುತ್ತಿದ್ದು, ಸಂವಿಧಾನ ಬದ್ಧವಾದ ಚುನಾವಣಾ ಆಯೋಗದ ವಿರುದ್ಧ ರಾಜ್ಯ ಸರ್ಕಾರದ ಸಹಕಾರದಿಂದ ಪ್ರತಿಭಟನೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.
ಈಗಾಗಲೇ ಈ ವಿಚಾರದ ಕುರಿತು ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣ ಇದ್ದು, ಸಂವಿಧಾನ ಬದ್ಧವಾದ ಯಾವುದೇ ಸಂಸ್ಥೆಗಳ ಮೇಲೆ ಇವರಿಗೆ ಗೌರವ ಇಲ್ಲ. ಇವರ ಸರ್ಕಾರ ಆಡಳಿತಕ್ಕೆ ಬಂದಾಗ ಚುಣಾವಣಾ ಆಯೋಗದ ತಪ್ಪು ಕಾಣುವುದಿಲ್ಲ. ಇವರಿಗೆ ಅನುಕೂಲ ಆಗುವ ಫಲಿತಾಂಶ ಬಂದಾಗ ಅಭಿಮಾನ ಹೆಚ್ಚಾಗುತ್ತದೆ. ವಿರುದ್ಧ ಫಲಿತಾಂಶ ಬಂದಾಗ ಅಗೌರವ ಮಾಡುವಂತ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಜನ ಇವರಿಗೆ ಪಾಠ ಕಲಿಸುತ್ತಾರೆ ಎಂದರು.
ಅಂಬೇಡ್ಕರ್ ಕೊಟ್ಟ ಸಂವಿಧಾನವನ್ನು ತಮ್ಮ ಸ್ವಾರ್ಥಕ್ಕಾಗಿ ತುರ್ತು ಪರಿಸ್ಥಿತಿಗೆ ಉಪಯೋಗಿಸಿಕೊಂಡಿದ್ದು ಕಾಂಗ್ರೆಸ್ ಎಂದ ಅವರು, ಬಿಜೆಪಿ ಸಂಸದರು, ಶಾಸಕರು ಸಹ ಮಂಗಳವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು.