

ತೀರ್ಥಹಳ್ಳಿ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರನ್ನು ನೇಮಿಸುವುದು ಅಸಾಧ್ಯವಾಗಿರುವುದರಿಂದ ಸರ್ಕಾರಿ ಶಾಲೆಗಳನ್ನೇ ಅವಲಂಬಿಸಿರುವ ಬಡವರು, ಕೂಲಿ ಕಾರ್ಮಿಕರ ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಅರೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡ್ತೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪ್ರೌಢಶಾಲಾ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ, ಸರ್ಕಾರಿ ಶಾಲೆಗಳಿಗೆ ಶಿಕ್ಷಕರ ಕೊರತೆ ನೀಗಿಸುವುದು ದೊಡ್ಡ ಸವಾಲಾಗಿದ್ದು ಅತಿಥಿ ಶಿಕ್ಷಕರಿಂದಲೇ ಈ ಕೊರತೆಯನ್ನು ಸರಿದೂಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಆದರೂ ಈ ಸಮಸ್ಯೆ ಪೂರ್ಣವಾಗಿ ಬಗೆಹರಿಯುತ್ತಿಲ್ಲ. ಹಾಗಾಗಿ ಖಾಸಗಿ ಶಾಲೆಗೆ ಕಳುಹಿಸಲಾಗದ ಬಡವರ ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರು ಅವಿರತ ಪ್ರಯತ್ನ ನಡೆಸುತ್ತಿರುವುದು ಪ್ರಶಂಸನೀಯ ಎಂದರು.
ಮಳೆಗಾಲದ ನಡುವೆಯೇ ಆರಂಭಿಕ ಹಂತದ ಕ್ರೀಡಾಕೂಟಗಳನ್ನು ನಡೆಸಬೇಕಾದ ಕಾರಣ ಮಲೆನಾಡು ಭಾಗದ ಮಕ್ಕಳು ಪ್ರತಿಕೂಲ ವಾತಾವರಣದಲ್ಲಿ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕಾದ ಅನಿವಾರ್ಯತೆ ಇದೆ. ಈ ಕ್ರೀಡಾಕೂಟದ ಸಮಯ ಬದಲಾವಣೆಗೆ ರಾಜ್ಯಮಟ್ಟದಲ್ಲಿ ಸಾಕಷ್ಟು ಪ್ರಯತ್ನಗಳು ನಡೆದಿವೆ. ಆದರೆ ಪರೀಕ್ಷಾ ಸಮಯ ಮತ್ತು ರಾಜ್ಯಮಟ್ಟದ ಕ್ರೀಡಾಕೂಟಗಳ ದಿನಾಂಕವನ್ನು ಸರಿದೂಗಿಸಬೇಕಾದ ಕಾರಣ ಈ ವ್ಯವಸ್ಥೆ ಅನಿವಾರ್ಯವಾಗಿದೆ. ಆದರೂ ಈ ಭಾಗದ ಹಲವು ಮಕ್ಕಳು ಅಂತಾರಾಷ್ಟಿçÃಯ ಮಟ್ಟದವರೆಗೂ ತಮ್ಮ ಪ್ರತಿಭೆಯನ್ನು ಮೆರೆದಿರುವುದು ಗಮನಾರ್ಹ ಎಂದರು.
ಕಡ್ತೂರು ಶ್ರೀನಿವಾಸ್, ಅರೇಹಳ್ಳಿ ಗ್ರಾಪಂ ಅಧ್ಯಕ್ಷೆ ಸವಿತಾ ಸುರೇಂದ್ರ, ಸದಸ್ಯರಾದ ಉಂಟುಗೋಡು ಸಿದ್ದಾರ್ಥ ಮತ್ತು ಯಶಸ್ವಿ, ಕಡ್ತೂರು ದಿನೇಶ್, ಮೋಹನ್ ಮತ್ತು ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣಮೂರ್ತಿ ಇದ್ದರು.