

ಸೋಮವಾರಪೇಟೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೊಡಗು ವೈದ್ಯಕೀಯ ವಿಜ್ಞಾನಗಳ ಮಹಾ ವಿದ್ಯಾಲಯ ಮತ್ತು ಬೋಧಕ ಆಸ್ಪತ್ರೆ, ತಾಲೂಕು ಆರೋಗ್ಯಾಧಿಕಾರಿ ಕಚೇರಿ ವತಿಯಿಂದ ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯುಷ್ಮಾನ್‌ಭವ ಅಭಿಯಾ ನದಡಿ ಆರೋಗ್ಯ ಶಿಬಿರ ಮತ್ತು ವಿಶ್ವ ಕ್ಯಾನ್ಸರ್ ದಿನ ಆಯೋಜಿಸಲಾಗಿತ್ತು.
ಶಿಬಿರಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಆರೋಗ್ಯಾಧಿಕಾರಿ ಸತೀಶ್ ಕುಮಾರ್, ಈ ಯೋಜನೆಯಡಿ ಸಾರ್ವಜನಿಕರಿಗೆ ಪ್ರತಿ ತಿಂಗಳು ಆರೋಗ್ಯ ತಪಾಸಣೆ ಮಾಡಲಾಗುತ್ತಿದ್ದು, ಸಾಕಷ್ಟು ಜನರು ಇದರ ಪ್ರಯೋಜನ ಪಡೆಯುತ್ತಿದ್ದಾರೆ ಎಂದರು.
ಜನರಲ್ಲಿ ಇಂದಿಗೂ ಕ್ಯಾನ್ಸರ್ ಕಾಯಿಲೆ ಬಗ್ಗೆ ಸರಿಯಾದ ಅರಿವು ಇಲ್ಲದಿರುವುದರಿಂದ ಹೆಚ್ಚಿನ ಜನರು ಮೃತಪಡುತ್ತಿದ್ದಾರೆೆ. ಎಷ್ಟೇ ಜಾಗೃತಿ ಮೂಡಿಸುತ್ತಿದ್ದರೂ ಜೀವ ಕಳೆದುಕೊಳ್ಳುತ್ತಿದ್ದಾರೆ. ಸರ್ಕಾರಿ ಕಾರ್ಯಕ್ರಮ ನಮಗೆ ನಾವೇ ಮಾಡಿಕೊಳ್ಳುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕ್ಯಾನ್ಸರ್ ಮೊದಲ ಮತ್ತು ಎರಡನೇ ಹಂತದಲಿದ್ದ ಸಂದರ್ಭ ಸರಿಯಾದ ಚಿಕಿತ್ಸೆ ಪಡೆದಲ್ಲಿ ಯಾವುದೇ ಜೀವಹಾನಿ ಆಗುವುದಿಲ್ಲ. ವಿಜ್ಞಾನ ಬಹಳಷ್ಟು ಮುಂದುವರಿದಿದ್ದು, ಪ್ರತಿ ಕಾಯಿಲೆಗೂ ಚಿಕಿತ್ಸೆ ಇದೆ. ಕೆಲವರು ತಾತ್ಸರ, ಮೂಡನಂಬಿಕೆ ಕಾರಣದಿಂದಲೋ ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆಯಲು ವಿಫಲರಾಗುತ್ತಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಹೇಳಿದರು.
ಕೊಡಗು ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕ ನಂಜುಂಡಯ್ಯ ಮಾತನಾಡಿ, ಕ್ಯಾನ್ಸರ್ ಬಗ್ಗೆ ಭಯ ಬೇಡ. ಆದರೆ ಜಾಗೃತಿ ಅಗತ್ಯ. ಕಾಯಿಲೆ ಬಗ್ಗೆ ಯಾವುದೇ ಕುರುಹು ಕಂಡುಬಂದರೂ, ತಕ್ಷಣ ಆಸ್ಪತ್ರೆಗೆ ತೆರಳಿ ತಪಾಸಣೆಗೆ ಒಳಪಡಬೇಕಿದೆ. ಇಂದು ತಂತ್ರಜ್ಞಾನ ಮುಂದುವರಿದಿದ್ದು, ಕಾಯಿಲೆಯನ್ನು ಬೇಗ ಕಂಡು ಹಿಡಿದಲ್ಲಿ ಶೇ. 98ರಷ್ಟು ಗುಣಮುಖರಾಗಬಹುದು ಎಂದರು.
ಆಯುಷ್ಮಾನ್ ಭವ ಆರೋಗ್ಯ ಅಭಿಯಾನದ ನೋಡಲ್ ಅಧಿಕಾರಿ ಡಾ. ರಾಮಚಂದ್ರ ನಾಯಕ್ ಮಾತನಾಡಿ, ಕ್ಯಾನ್ಸರ್ ಎಲ್ಲರನ್ನೂ ಕಾಡುತ್ತಿದೆ. ಮನುಷ್ಯನಿಗಿರುವ ಸಪ್ತ ವ್ಯಸನಗಳಿಂದ ಕಾಯಿಲೆಗಳು ಇನ್ನಿಲ್ಲದಂತೆ ಕಾಡುತ್ತಿವೆ. ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತೊಬ್ಬರ ನೆರವನ್ನು ಬಯಸದೆ ನಾವೇ ಕಾಪಾಡಿಕೊಳ್ಳಲು ಮುಂಜಾಗ್ರತೆ ವಹಿಸಬೇಕು ಎಂದರು.
ಶಿಬಿರದಲ್ಲಿ ಅಂಗವಿಕಲರ ಪ್ರಮಾಣಪತ್ರ, ಆರೋಗ್ಯ ಕಾರ್ಡ್ ನೋಂದಣಿ, ಆಯುಷ್ಮಾನ್ ಕಾರ್ಡ್ ಮತ್ತು ಪಿಎಂಜೆವೈ ಕಾರ್ಡ್ ನೋಂದಣಿ ಮಾಡಲಾಯಿತು. ವೇದಿಕೆಯಲ್ಲಿ ಡಿಎಸ್‌ಒ ಶ್ರೀನಿವಾಸ್, ತಾಲೂಕು ಆರೋಗ್ಯಾಧಿಕಾರಿ ಇಂದೂಧರ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಚ್.ಕೆ. ಶಾಂತಿ, ಪ್ಯಾರಾ ಮೆಡಿಕಲ್ ಸೆಂಟರ್‌ನ ಉಪನ್ಯಾಸಕಿ ಮಂಜುಳಾ ಇದ್ದರು.