

ಯಲ್ಲಾಪುರ: ವಿದ್ಯಾರ್ಥಿಗಳು ಯಾವುದೇ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದೇ ಪ್ರಮುಖವಾಗಿದ್ದು, ಕೇವಲ ಬಹುಮಾನ ಗಳಿಕೆಯೇ ಪ್ರಧಾನವಲ್ಲ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಪಟ್ಟಣದ ವೈಟಿಎಸ್ಎಸ್ ಸಭಾಂಗಣದ ದಿ. ನಾರಾಯಣ ನಾಯಕ ವೇದಿಕೆಯಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲ ವಿದ್ಯಾರ್ಥಿಗಳಲ್ಲಿಯೂ ಒಂದಿಲ್ಲೊಂದು ಬಗೆಯ ಪ್ರತಿಭೆಗಳು ಸುಪ್ತವಾಗಿರುತ್ತವೆ. ಇಂತಹ ಪ್ರತಿಭೆ ಗುರುತಿಸಿ, ಅವುಗಳಿಗೆ ವೇದಿಕೆ ಮೂಲಕ ಅವಕಾಶ ದೊರಕಿಸಿಕೊಡಲು ಪ್ರತಿಭಾ ಕಾರಂಜಿ ಸಹಕಾರಿಯಾಗಿದೆ ಎಂದರು.
ಪ.ಪಂ. ಉಪಾಧ್ಯಕ್ಷ ಅಮಿತ್ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ವೈಟಿಎಸ್ಎಸ್ ಅಧ್ಯಕ್ಷ ರವಿಕುಮಾರ ಶಾನಭಾಗ ಮಾತನಾಡಿದರು. ಕಲಾಶ್ರೀ ಪ್ರಶಸ್ತಿ ಪುರಸ್ಕೃತ ಬಿಸಗೋಡು ಪ್ರೌಢಶಾಲೆಯ ವಿದ್ಯಾರ್ಥಿನಿ ಸಮೃದ್ಧಿ ಭಾಗ್ವತ ಅವರನ್ನು ಅಭಿನಂದಿಸಲಾಯಿತು.
ಡಿಡಿಪಿಐ ಪಾರಿ ಬಸವರಾಜ, ಬಿಇಒ ಎನ್.ಆರ್. ಹೆಗಡೆ, ಸಾಮಾಜಿಕ ಕಾರ್ಯಕರ್ತ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ, ಶಿರಸಿಯ ಡಯಟ್ ಪ್ರಾಂಶುಪಾಲ ಎನ್.ಎಸ್. ಹೆಗಡೆ, ವಿವಿಧ ಸಂಘಟನೆಗಳ ಪ್ರಮುಖರಾದ ಸಂಜೀವಕುಮಾರ ಹೊಸ್ಕೇರಿ, ಪ್ರಕಾಶ ತಾರೀಕೊಪ್ಪ, ಸದಾನಂದ ಸ್ವಾಮಿ, ಆರ್.ಆರ್. ಭಟ್ಟ, ಅಜಯ ನಾಯಕ, ಬಾಲಚಂದ್ರ ಪಟಗಾರ ಉಪಸ್ಥಿತರಿದ್ದರು.