

ಮೈಸೂರು: ದೇಹಕ್ಕೆ ಕೊಟ್ಟಷ್ಟೇ ಮಹತ್ವವನ್ನು ಮನಸ್ಸಿಗೂ ನೀಡಬೇಕು. ಮನಸ್ಸಿನ ಆರೋಗ್ಯ ಕಾಪಾಡಿಕೊಳ್ಳಲು ಜನರು ಮೂಢನಂಬಿಕೆಗೆ ಬಲಿಯಾಗಬಾರದು ಎಂದು ಬೆಂಗಳೂರಿನ ನಿಮ್ಹಾನ್ಸ್ ಸಂಸ್ಥೆ ನಿವೃತ್ತ ಪ್ರಾಧ್ಯಾಪಕ ಹಾಗೂ ಮನೋವೈದ್ಯ ಡಾ.ಸಿ.ಆರ್.ಚಂದ್ರಶೇಖರ್ ಸಲಹೆ ನೀಡಿದರು.
ನಗರದ ಗೋಪಾಲಸ್ವಾಮಿ ಶಿಶುವಿಹಾರ ಶಿಕ್ಷಣ ಸಂಸ್ಥೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಭಾನುವಾರ ಆಯೋಜಿಸಿದ್ದ ಸನ್ಮಾನ, ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಹ ಮಾತ್ರವಲ್ಲ, ಮನಸ್ಸಿನ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಮನಸ್ಸು ಪ್ರಶಾಂತವಾಗಿದ್ದರೆ ದೇಹ ಸ್ಥಿತಿಯೂ ಚೆನ್ನಾಗಿರುತ್ತದೆ. ಆಧುನಿಕ ದಿನಗಳಲ್ಲಿ ಮನೋರೋಗಕ್ಕೆ ವೈಜ್ಞಾನಿಕ ಚಿಕಿತ್ಸೆ ಲಭ್ಯವಿದೆ ಎಂದು ಹೇಳಿದರು.
ಜನರು ತಪ್ಪು ಕಲ್ಪನೆಯೊಂದಿಗೆ ಮೂಢನಂಬಿಕೆ ದಾರಿ ಹಿಡಿಯುತ್ತಿದ್ದಾರೆ. ಅಂತಹ ಪ್ರವೃತ್ತಿ ಬಿಟ್ಟು ಹೊರಬೇಕು. ಮಾನಸಿಕ ಅರೋಗ್ಯ ನಿವಾರಣೆಗೆ ಧನಾತ್ಮಕ ಚಿಂತನೆಯಲ್ಲಿ ತೊಡಗಬೇಕು ಎಂದು ಹೇಳಿದರು.
ಪದ್ಮಶ್ರೀ ಪುರಸ್ಕೃತ ಬುಡಕಟ್ಟು ಸಮುದಾಯದ ಮುಖಂಡ ಸೋಮಣ್ಣ ಮಾತನಾಡಿ, ಪದ್ಮಶ್ರೀ ಪ್ರಶಸ್ತಿಯಿಂದ ಇನ್ನಷ್ಟು ಜವಾಬ್ದಾರಿ ಹೆಚ್ಚಿದೆ. ಎಲ್ಲರ ಪ್ರೀತಿ ದೊರಕ್ಕಿದ್ದು ಹೋರಾಟಕ್ಕೆ ಮತ್ತಷ್ಟು ಶಕ್ತಿ ಲಭಿಸಿದೆ. ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುತ್ತಾಳೆ. ಅದರಂತೆ ನನ್ನ ಈ ಯಶಸ್ಸಿಗೆ ಪತ್ನಿಯ ಪ್ರೋತ್ಸಾಹ ಕಾರಣ. ಹಾಡಿ ಹಾಗೂ ಕುಗ್ರಾಮಗಳಲ್ಲಿನ ಬುಡಕಟ್ಟು ಸಮುದಾಯದವರು ಸರ್ಕಾರದ ಸವಲತ್ತು ಉಪಯೋಗಿಸಿಕೊಳ್ಳಬೇಕು. ಸಮುದಾಯದ ಮಕ್ಕಳು ಉನ್ನತ ಶಿಕ್ಷಣ ಪಡೆಯಬೇಕು. ಮುಖ್ಯವಾಹಿನಿಗೆ ಬರಬೇಕು ಎಂದರು.
ಗೋಪಾಲಸ್ವಾಮಿ ಶಿಶುವಿಹಾರ ಶಿಕ್ಷಣ ಸಂಸ್ಥೆ ಸಂಯೋಜಕ ಎನ್.ಆರ್.ಮಂಜುನಾಥ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಎ.ಎಸ್.ಚಂದ್ರಶೇಖರ್, ಶಿಕ್ಷಕ ನಾಗರಾಜು, ಕಾರ್ಯಕ್ರಮ ಸಂಯೋಜಕ ಡಾ.ಜಿ.ಅಚ್ಚುತರಾವ್, ಸಹಾಯಕ ಪ್ರಾಧ್ಯಾಪಕಿ ಜ್ಯೋತಿ, ರಾಜೇಂದ್ರ ಪ್ರಸಾದ್ ಇತರರಿದ್ದರು.