

ವಿಜಯವಾಣಿ ಸುದ್ದಿಜಾಲ ಧಾರವಾಡ
ಹೊರ ರಾಜ್ಯದಲ್ಲಿನ ಕನ್ನಡ ಶಾಲೆಗಳಿಗೆ ಕರ್ನಾಟಕ ಸರ್ಕಾರ ಮೂಲಭೂತ ಸಹಕಾರ ನೀಡಬೇಕು ಎಂದು ನರಗುಂದ ಭೈರನಟ್ಟಿ ದೊರೆಸ್ವಾಮಿ ವಿರಕ್ತಮಠದ ಶ್ರೀ ಶಾಂತಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಕರ್ನೂಲ್ ಮತ್ತು ಅನಂತಪುರ ಜಿಲ್ಲೆಗಳ ಕನ್ನಡ ಸಂಘಗಳ ಸಹಯೋಗದಲ್ಲಿ ಆಂಧ್ರಪ್ರದೇಶದ ಆದವಾನಿಯಲ್ಲಿ ಭಾನುವಾರ ಆಯೋಜಿಸಿದ್ದ ಅಖಿಲ ಭಾರತ ಹೊರನಾಡ ಕನ್ನಡ ಸಂಘಗಳ ಮಹಾಮೇಳದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ನೆಲ, ಜಲ, ಭಾಷೆಯಲ್ಲಿ ರಾಜಕಾರಣಿಗಳ ಇಚ್ಚಾಶಕ್ತಿ ಕೊರತೆ ಇದೆ. ನೆಲ-ಜಲದ ವಿಷಯಗಳಲ್ಲಿ ಸ್ವಾಭಿಮಾನಿಗಳಾಗಿ ಹೋರಾಡಬೇಕು. ಬೇರೆ ಬೇರೆ ಸಂಸ್ಥೆಗಳು ಆಂಗ್ಲ ಭಾಷೆ ಶಾಲೆಗಳನ್ನು ತೆರೆಯುವುದರಿಂದ ಕನ್ನಡದ ಅಸ್ಮಿತೆ ಕುಗ್ಗುತ್ತಿದೆ. ಮಾತೃ ಭಾಷೆಯಲ್ಲೇ ಶಿಕ್ಷಣ ದೊರೆಯುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರಬೇಕು ಎಂದರು.
ಮಾಲತಿ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಆದವಾನಿಯ ಕಲ್ಮಠ ಮಂಡಿಗಿರಿ ಶ್ರೀ ಗುರುಸಿದ್ದ ದೇವರು ಸಮ್ಮುಖ ವಹಿಸಿದ್ದರು.
ಯಗಟಿ ಪ್ರತಾಪ, ಕೆ.ಎಂ. ಮಲ್ಲಿಕಾರ್ಜುನಸ್ವಾಮಿ, ದೇಸಾಯಿ ಚಂದ್ರಣ್ಣ, ಬಸವಪ್ರಭು ಹೊಸಕೇರಿ, ಸತೀಶ ತುರಮರಿ, ಶಂಕರ ಕುಂಬಿ, ಗುರು ಹಿರೇಮಠ, ವಿಶ್ವೇಶ್ವರಿ ಹಿರೇಮಠ, ಡಾ. ಧನವಂತ ಹಾಜವಗೋಳ ಇತರರು ಇದ್ದರು.
ಶಿವಾನಂದ ಭಾವಿಕಟ್ಟಿ ಮಹಾಮೇಳದ ನಿರ್ಣಯಗಳನ್ನು ಮಂಡಿಸಿದರು. ಡಿ. ಸಿದ್ಧನಗೌಡ ಸ್ವಾಗತಿಸಿದರು. ಶಂಕರ ಹಲಗತ್ತಿ ವಂದಿಸಿದರು.
*ಮಹಾಮೇಳದಲ್ಲಿ ಕೈಗೊಂಡ ನಿರ್ಣಯಗಳು: * ಕರ್ನಾಟದಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಸಿಗುವ ಶೈಕ್ಷಣಿಕ ಮತ್ತು ಉದ್ಯೋಗ ಅವಕಾಶಗಳನ್ನು ಕನ್ನಡ ಮಾಧ್ಯಮದಲ್ಲಿ ಓದಿದ ಗಡಿನಾಡ ಮತ್ತು ಹೊರನಾಡ ಕನ್ನಡಿಗರಿಗೂ ವಿಸ್ತರಿಸಬೇಕು. *ಹೊರನಾಡಿನಲ್ಲಿ ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಪ್ರೌಢಶಾಲೆ ಶಿಕ್ಷಣ ಪೂರೈಸಿದ ವಿದ್ಯಾರ್ಥಿಗಳಿಗೆ ಕರ್ನಾಟಕದಲ್ಲಿ ಓದು ಬಯಸಿದರೆ ವಿದ್ಯಾರ್ಥಿ ನಿಲಯಗಳಲ್ಲಿ ಮೀಸಲಾತಿ ಕಲ್ಪಿಸಬೇಕು. *ಹೊರನಾಡ ಕನ್ನಡ ಶಾಲೆಗಳಲ್ಲಿ ಕನ್ನಡ ಪಠ್ಯ ಪುಸ್ತಕಗಳ ಲಭ್ಯತೆ ಇಲ್ಲದಿರುವುದು ಸಾಮಾನ್ಯ. ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆ ಈ ಕೊರತೆ ನೀಗಿಸಲು ಆಯಾ ರಾಜ್ಯ ಸರ್ಕಾರಗಳೊಂದಿಗೆ ಸಮನ್ವಯ ಸಾಧಿಸಬೇಕು.* ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದಲ್ಲಿ ಗಡಿ ಭಾಗಗಳ ರಾಜ್ಯದಿಂದ ಗಡಿ ಭಾಗದವರನ್ನು ಕಡ್ಡಾಯವಾಗಿ ಸದಸ್ಯರನ್ನಾಗಿ ನೇಮಿಸಬೇಕು. ಹಾಗೆಯೇ ಸರ್ಕಾರದಿಂದ ನೀಡುತ್ತಿರುವ ಪ್ರಶಸ್ತಿಗಳ ಆಯ್ಕೆಯಲ್ಲೂ ಅನುಸರಿಸುವುದು.