

ಹಾನಗಲ್ಲ: ಸಾಮಾಜಿಕ ಜೀವನದಲ್ಲಿ ಜಾತಿ- ಅಂತಸ್ತುಗಳ ಲೇಪನಕ್ಕೆ ಅವಕಾಶವಿಲ್ಲದಂತೆ ಸಜ್ಜನನಾಗಿ ಬದುಕುವುದೇ ನಿಜವಾದ ವಚನ ಧರ್ಮ ಎಂದು ಶ್ರೀ ಕುಮಾರೇಶ್ವರ ಕಲಾ ವಾಣಿಜ್ಯ ಮಹಾವಿದ್ಯಾಲಯದ ಪ್ರೊ. ನಾಗರಾಜ ದೊಡ್ಡಮನಿ ಹೇಳಿದರು.
ಪಟ್ಟಣದ ಶ್ರೀ ಕುಮಾರೇಶ್ವರ ವಿರಕ್ತಮಠದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಶರಣ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಕಲ ಜೀವಿಗಳಿಗೆ ಲೇಸ ಬಯಸುವುದೇ ಮಾನವ ಧರ್ಮ. ಬಸವಣ್ಣನವರ ವಿಚಾರಧಾರೆಯನ್ನು ಮನೆ-ಮನಸುಗಳಿಗೆ ತಲುಪಿಸುವ ಕಾರ್ಯ ನಡೆಯಬೇಕು ಎಂದರು.
ಶಸಾಪ ತಾಲೂಕು ಘಟಕದ ಉಪಾಧ್ಯಕ್ಷ ಎಸ್.ಪಿ. ಹೇಮಗಿರಿಮಠ ಮಾತನಾಡಿ, ಅಕ್ಕಮಹಾದೇವಿಯಂತಹ ನಿಷ್ಠ ಶರಣೆ ಇಡೀ ಮನುಕುಲಕ್ಕೆ ಬದುಕಿನ ಸತ್ಯಗಳನ್ನು ತಿಳಿ ಹೇಳಿದ್ದಾರೆ. ಬಸವಣ್ಣನವರು ಮಹಿಳಾ ಸಮಾನತೆಗಾಗಿ ಮಾಡಿದ ಹೋರಾಟದ ಫಲವೇ ವಚನಕಾರ್ತಿಯರು ಮುಕ್ತವಾಗಿ ಅಭಿಪ್ರಾಯ ಹಂಚಿಕೊಳ್ಳಲು ಸಾಧ್ಯವಾಗಿದೆ. ಶರಣರು ಜಾತಿ ರಹಿತ ಸಮಾಜದ ಸಂಕಲ್ಪಕ್ಕೆ ಮುಂದಾಗಿದ್ದರು. ಈಗ ಮತ್ತೆ ವಚನ ಕ್ರಾಂತಿ ನಡೆಯಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶಿವಗಂಗಕ್ಕ ಪಟ್ಟಣದ ಮಾತನಾಡಿ, ಉತ್ತಮ ಸಮಾಜಕ್ಕಾಗಿ ವಚನಗಳು ಅತ್ಯುತ್ತಮ ಸಂದೇಶ ನೀಡಬಲ್ಲವು ಎಂದರು.
ಜಯಶ್ರೀ ತಿಳವಳ್ಳಿ, ಪುರಸಭೆ ಸದಸ್ಯೆ ವೀಣಾ ಗುಡಿ, ರೇಖಾ ಶೆಟ್ಟರ, ಸುಮಂಗಲ ಕಟ್ಟಿಮಠ, ಜ್ಯೋತಿ ಬೆಲ್ಲದ, ವಿಜಯಲಕ್ಷ್ಮೀ ಹಳ್ಳೀಕೇರಿ, ಸವಿತಾ ಉದಾಸಿ, ಮಂಗಳ ಅರಳಲಿಮಠ, ಅಕ್ಕಮ್ಮ ಕುಂಬಾರಿ ಇದ್ದರು. ವಿಜಯಕ್ಕಾ ಕಬ್ಬೂರ ವಚನ ಪ್ರಾರ್ಥನೆ ಹಾಡಿದರು. ಕವಿತಾ ಹಿರೇಗೌಡರ ಸ್ವಾಗತಿಸಿದರು. ಸುಜಾತಾ ನಂದೀಶೆಟ್ಟರ ವಂದಿಸಿದರು.