

ಸಿದ್ದಾಪುರ: ಅಮೃತ ನೀಡುವ ಪರಿಸರವನ್ನು ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಮನುಷ್ಯರಂತೆ ಗಿಡಗಳಲ್ಲಿಯೂ ಸಂಘರ್ಷ ಇದೆ. ಆದರೆ, ಅವುಗಳು ಬೇರೆ ಗಿಡಗಳು ಬೆಳೆಯಲು ಅವಕಾಶ ನೀಡುತ್ತವೆ. ಮಾನವ ಹೇಗೆ ಪಂಚತತ್ವವವನ್ನು ಅನುಸರಿಸಿ ಜೀವನ ನಡೆಸುತ್ತಾನೆಯೋ ಹಾಗೆಯೇ ಪರಿಸರವೂ ಆಗಿದೆ ಎಂದು ಎಸಿಎಫ್ ಪ್ರವೀಣಕುಮಾರ ಬಸ್ರೂರ ಹೇಳಿದರು.
ಪಟ್ಟಣ ಸಮೀಪದ ವಡ್ಡಿನಗದ್ದೆಯ ಭಾರತಿ ಸಂಪದವು ಅರಣ್ಯ ಇಲಾಖೆ, ಸಂಸ್ಕೃತಿ ಸಂಪದ ಹಾಗೂ ಪ್ರಯೋಗ ಸ್ವಯಂ ಸೇವಾ ಸಂಸ್ಥೆಯ ಸಹಯೋಗದಲ್ಲಿ ವಿಶ್ವ ಪರಿಸರ ದಿನ ನಿಮಿತ್ತ ಶುಕ್ರವಾರ ಏರ್ಪಡಿಸಿದ್ದ ದೇವದಾರು ಬನ ಪುನರ್ ಉತ್ಪತ್ತಿ ಮತ್ತು ಮನೆಗೊಂದು ಹಣ್ಣಿನ ಗಿಡ ಕಾರ್ಯಕ್ರಮದಲ್ಲಿ ದೇವದಾರು ಸಸಿ ನೆಟ್ಟು ಅವರು ಮಾತನಾಡಿದರು.
ಅರಣ್ಯ ಇಲಾಖೆಯವರು ಪರಿಸರವನ್ನು ಉಳಿಸಲು ಸಂಬಳ ಪಡೆದುಕೊಳ್ಳತ್ತೇವೆ. ಆದರೆ, ಪರಿಸರ ಪ್ರೇಮಿ ಗಣಪತಿ ಹೆಗಡೆ ವಡ್ಡಿನಗದ್ದೆ ಅವರು ಪರಿಸರ ಬೆಳೆಸುವುದು ತಮ್ಮ ಧರ್ಮ ಎಂದು ತಿಳಿದು ಹಲವು ವರ್ಷಗಳಿಂದ ವಿನಾಶದಂಚಿನಲ್ಲಿರುವ ಸಸ್ಯಗಳನ್ನು ಉಳಿಸುವ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಸಿದ್ದಾಪುರ ಶಂಕರಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ ಅವರು ಮನೆಗೊಂದು ಹಣ್ಣಿನ ಗಿಡವನ್ನು ಸಾಂಕೇತಿಕವಾಗಿ ವಿತರಿಸಿ ಮಾತನಾಡಿ, ವನಮಹೋತ್ಸವ ಎನ್ನುವುದು ನಿತ್ಯೋತ್ಸವ ಆಗಬೇಕು. ಪಶ್ಚಿಮಘಟ್ಟದ ಪರಿಸರದಲ್ಲಿ ಅನೇಕ ಸಸ್ಯಗಳಿವೆ. ಅವುಗಳಲ್ಲಿ ಅನೇಕ ಸಸ್ಯಗಳು ಇಂದು ವಿನಾಶದಂಚಿನಲ್ಲಿರುವುದನ್ನು ಗಮನಿಸಿ ಗಣಪತಿ ಹೆಗಡೆ ಅವರು ಅವುಗಳನ್ನು ಉಳಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತ ಎಂ.ಬಿ. ನಾಯ್ಕ ಕಡಕೇರಿ ಅವರು ದೇವದಾರು ಗಿಡದ ಮಹತ್ವ ಹಾಗೂ ಪಶ್ಚಿಮಘಟ್ಟದಲ್ಲಿನ ಔಷಧ ಗಿಡಗಳ ಕುರಿತು ಮಾಹಿತಿ ನೀಡಿದರು. ವಲಯ ಅರಣ್ಯಾಧಿಕಾರಿ ಬಸವರಾಜ ಬೋಚಳ್ಳಿ, ಡಿಆರ್‌ಎಫ್‌ಒ ಮಂಜುನಾಥ ಚಿನ್ನಣ್ಣವರ, ಮಧುಮತಿ ಶಿಗೇಹಳ್ಳಿ, ಹೊಸೂರಿನ ಸಂಕಲ್ಪ ಸೇವಾ ಟ್ರಸ್ಟ್‌ನ ಪಿ.ಬಿ. ಹೊಸೂರು ಇತರರಿದ್ದರು.
ಅರಣ್ಯ ಇಲಾಖೆಯ ಸಸ್ಯಪಾಲಕ ಪರಮೇಶ್ವರ ಗೊಂಡ ಹಲಗೇರಿ ಅವರನ್ನು ಸನ್ಮಾನಿಸಲಾಯಿತು. ವಡ್ಡಿನಗದ್ದೆಯ ಭಾರತಿ ಸಂಪದದ ಮುಖ್ಯಸ್ಥ ಗಣಪತಿ ಹೆಗಡೆ ವಡ್ಡಿನಗದ್ದೆ ಮಾತನಾಡಿದರು. ಪ್ರಯೋಗ ಸ್ವಯಂಸೇವಾ ಸಂಸ್ಥೆಯ ಗಂಗಾಧರ ಕೊಳಗಿ ಕಾರ್ಯಕ್ರಮ ನಿರ್ವಹಿಸಿದರು.