

ಹೊಳೆನರಸೀಪುರ: ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆಯನ್ನು ತಂದ ಬುಕರ್ ಪ್ರಶಸ್ತಿ ವಿಜೇತ ಹಾರ್ಟ್ ಲ್ಯಾಂಪ್ ಕೃತಿಯ ಲೇಖಕರು ಮತ್ತು ಅನುವಾದಕರನ್ನು ಗೌರವಿಸಬೇಕಾದದು ಪ್ರಜ್ಞಾವಂತ ಸಮಾಜದ ಜವಾಬ್ದಾರಿ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ವೈ.ಚಂದ್ರಶೇಖರ್ ಅಭಿಪ್ರಾಯಪಟ್ಟರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸಮಾನ ಮನಸ್ಕರ ವೇದಿಕೆಯಿಂದ ಆಯೋಜಿಸಿದ್ದ ಹಾರ್ಟ್ ಲ್ಯಾಂಪ್ ಕೃತಿಯ ನಾಟಕ ಪ್ರದರ್ಶನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ದಂಡೋರ ರಿಸರ್ವೇಶನ್ ಹೋರಾಟ ಸಮಿತಿಯ ರಾಜ್ಯ ಕಾರ್ಯದರ್ಶಿ ಟಿ.ಆರ್. ವಿಜಯಕುಮಾರ್ ಮಾತನಾಡಿ, ಬಾನು ಮುಷ್ತಾಕ್ ಅವರು ಶಿಕ್ಷಕಿ, ಲೇಖಕಿ, ವಕೀಲರಾಗಿ ಅಸಮಾನತೆ, ಅಮಾನವೀಯತೆ ವಿರುದ್ಧ ನಿರಂತರವಾಗಿ ಹೋರಾಟ ಮಾಡುತ್ತಿದ್ದಾರೆ. ಇಂದು ಅವರ ಕೃತಿಗೆ ಜಾಗತಿಕ ಮಟ್ಟದಲ್ಲಿ ಗೌರವ ಸಿಕ್ಕಿರುವುದು ರಾಜ್ಯ, ರಾಷ್ಟ್ರ ಹಾಗು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಈ ವಿಚಾರದಲ್ಲಿ ಪ್ರಧಾನ ಮಂತ್ರಿಗಳು ಅಭಿನಂದಿಸದಿರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜು.12ರಂದು ಹೊಳೆನರಸೀಪುರ ಪಟ್ಟಣದ ತಾಲೂಕು ಕಚೇರಿ ಮುಂಭಾಗದ ಸಾರ್ವಜನಿಕ ಸಮುದಾಯ ಭವನದಲ್ಲಿ ಹಾರ್ಟ್ ಲ್ಯಾಂಪ್ ಕೃತಿಯ ನಾಟಕ ಪ್ರದರ್ಶನವಾಗಲಿದೆ. ಶಿವಮೊಗ್ಗದ ನೀನಾಸಂ ಕಲಾವಿದರು ಅಭಿನಯಿಸಲಿದ್ದಾರೆ. ಕಾರ್ಯಕ್ರಮದಲ್ಲಿ ನಗರದ ನಾಗರಿಕರು ಭಾಗವಹಿಸಿ ನಾಟಕ ವೀಕ್ಷಿಸುವಂತೆ ಮನವಿ ಮಾಡಿದರು.
ಬೌದ್ಧ ಮಹಾಸಭಾ ಮುಖಂಡ ಡಾ.ವೆಂಕಟೇಶ್ ಮೂರ್ತಿ ಮಾತನಾಡಿ, ಬಾನು ಮುಷ್ತಾಕ್ ಅವರು ಸಾಹಿತ್ಯ ಕ್ಷೇತ್ರದಲ್ಲಿ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದಿದ್ದಾರೆ. ಅವರನ್ನು ಅವರ ಕೃತಿಯನ್ನು ಸಮಾಜಕ್ಕೆ ವಿವರಿಸುವ ಉದ್ದೇಶದಿಂದ ಈ ನಾಟಕವನ್ನು ಪ್ರದರ್ಶಿಸಿ, ಲೇಖಕರನ್ನು ಗೌರವಿಸುವ ಕಾರ್ಯ ಮಾಡಲಾಗುತ್ತಿದೆ. ತಾಲೂಕಿನ ಪ್ರಗತಿಪರ ಸಂಘ, ಸಂಸ್ಥೆಗಳು, ಎಲ್ಲ ಸಮುದಾಯದ ಸಂಘಟನೆಗಳು ಸಾಹಿತ್ಯ ಪರಿಷತ್ತಿನ ಸಂಘಟನೆಗಳು ಕಾರ್ಮಿಕ ಸಂಘಟನೆಗಳು ಕನ್ನಡಪರ ಸಂಘಟನೆಗಳ ಸಮ್ಮುಖದಲ್ಲಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದರು.
ದಂಡೋರ ಸಮಿತಿಯ ಕೆಎಂ ನಾಗರಾಜು, ಸತೀಶ್, ಮಹೇಶ್, ರಾಮದಾಸ್ ಬುದ್ದ ಗೆಳೆಯರ ಬಳಗದ ವಕೀಲ ಮಂಜುನಾಥ್, ಶಶಿಧರ್, ಸುಪ್ರೀತ್ ಪಾಸ್ವಾನ್, ದಲಿತ ಸಂಘರ್ಷ ಸಮಿತಿಯ ಜಗದೀಶ್, ಆನಂದ್, ಚಿನ್ನಸ್ವಾಮಿ, ಜವರೇಶ ಪುರಸಭಾ ಸದಸ್ಯ ಉಮೇಶ್, ನಿವೃತ್ತ ನೌಕರ ಕರಿಯಪ್ಪ, ದಲಿತ ಸಂಘರ್ಷ ಸಮಿತಿ, ದಂಡೋರ ಸಮಿತಿ, ಇನ್ನಿತರ ಪ್ರಗತಿಪರ ಸಂಘ ಸಂಸ್ಥೆಗಳ ಕಾರ್ಯಕರ್ತರು ಉಪಸ್ಥಿತರಿದ್ದರು.