ಪಾರಂಪರಿಕ ಕಲೆ ಉಳಿಸಿ&ಬೆಳೆಸುವ ಜವಾಬ್ದಾರಿ ಎಲ್ಲರದು

Untitled-1
ಹೊಸಕೋಟೆ ಹೊರವಲಯದ ನಿಂಬೆಕಾಯಪುರ ಜನಪದರ ಸಾಂಸತಿಕ ಜನಪದರು ವೇದಿಕೆಯಲ್ಲಿ ಮೂಡಲಪಾಯ ಯಕ್ಷಗಾನ ಪ್ರಸ್ತುತ ಪಡಿಸಿದ ಕಲಾವಿದರೊಂದಿಗೆ ಮಾಜಿ ಸಚಿವ ಅರವಿಂದ ಲಿಂಬಾವಳಿ, ಡಾ.ಜಯಪ್ರಕಾಶ್​ಗೌಡ, ಜನಪದರು ಅಧ್ಯಕ್ಷ ಕಾಟಂನಲ್ಲೂರು ಪಾಪಣ್ಣ, ಸಿದ್ದೇಶ್ವರ ನನಸುಮನೆ, ಎಂ.ಸುರೇಶ್​, ವೇಂಕಟಾಚಲಪತಿ, ಕೆ.ಸುರೇಶ ಹಾಗೂ ಇತರರು.
Published on

ಹೊಸಕೋಟೆ : ಯಕ್ಷಗಾನದಂತೆ ಪಾರಂಪರಿಕ ಕಲೆಗಳು ಕರ್ನಾಟಕದ ಎಲ್ಲ ಭಾಗಗಳಲ್ಲಿದ್ದು, ಅವುಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಹೇಳಿದರು.

ನಗರ ಹೊರವಲಯದ ನಿಂಬೆಕಾಯಿಪುರ ಬಳಿಯ ಜನಪದರು ರಂಗ ಮಂದಿರದ ಸಾಂಸತಿಕ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ಮೂಡಲಪಾಯ ಯಕ್ಷಗಾನ ಪ್ರಸಂಗಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬೆಂಗಳೂರಿನ ನಾಲ್ಕೂ ದಿಕ್ಕುಗಳಲ್ಲಿ ಆಧುನಿಕ ರಂಗಮಂದಿರಗಳನ್ನು ನಿರ್ಮಿಸಬೇಕೆಂದು ನನ್ನ ಅವಧಿಯಲ್ಲಿ ಬೆಂಗಳೂರಿನ ಪೂರ್ವದಲ್ಲಿ ಜನಪದರು ರಂಗಮಂದಿರ ನಿರ್ಮಿಸಿ, ಅಂದಿನ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪ ಅವರಿಂದ ಉದ್ಘಾಟಿಸಲಾಗಿತ್ತು ಎಂದರು.

ಕರ್ನಾಟಕ ಮೂಡಲಪಾಯ ಯಕ್ಷಗಾನ ಪರಿಷತ್​ ಮುಖ್ಯಸ್ಥ ಡಾ.ಜಯಪ್ರಕಾಶ್​ಗೌಡ ಮಾತನಾಡಿ, ಮೂಡಪಾಯ ಯಕ್ಷಗಾನ ದಿನೇದಿನೆ ನಶಿಸಿಹೋಗುತ್ತಿರುವ ಅತ್ಯಂತ ಸಿರಿವಂತ ಪ್ರದರ್ಶನ ಕಲೆಯಾಗಿದ್ದು, ಇತ್ತೀಚೆಗಂತೆ ಈ ಕಲೆಯಲ್ಲಿ ಪಕ್ಕವಾದ್ಯಗಳಲ್ಲಿ ಮುಖವೀಣೆ ನುಡಿಸುವ ಪರಿಣಿತರೆ ಇಲ್ಲವೆಂಬಂತಾಗಿದೆ. ಹಾಗಾಗಿ ಮೂಡಲಪಾಯ ಯಕ್ಷಗಾನವನ್ನು ಉಳಿಸಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ. ಮಕ್ಕಳಲ್ಲಿ ಈ ಕಲೆಯ ಬಗ್ಗೆ ಆಸಕ್ತಿ ಬೆಳಸಲು ಆಯ್ದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮೂಡಲಪಾಯ ಯಕ್ಷಗಾನ ಕಲಿಸಲಾಗುತ್ತಿದೆ. ಮುಂದಿನ ಪೀಳಿಗೆಗೆ ಕಲೆಯನ್ನು ತೆಗೆದುಕೊಂಡು ಹೋಗಲು ಮೂಡಲಪಾಯ ಯಕ್ಷಗಾನದಲ್ಲಿ ಬಳಸುವ ವಾದ್ಯಗಳ ಬಗ್ಗೆ ತರಬೇತಿ ನೀಡಲಾಗುತ್ತಿದೆ ಎಂದು ವಿವರಿಸಿದರು.

ಜನಪದರು ಅಧ್ಯಕ್ಷ ಕಾಟಂನಲ್ಲೂರು ಪಾಪಣ್ಣ ಮಾತನಾಡಿ, ಜನಪದರು ಸಾಂಸತಿಕ ವೇದಿಕೆಯ ಮುಖ್ಯ ಉದ್ದೇಶಗಳಲ್ಲಿ ಪರಂಪರಾಗತವಾಗಿ ಬಂದಿರುವ ಪ್ರದರ್ಶನ ಕಲೆಗಳನ್ನು ಹೆಚ್ಚುಹೆಚ್ಚು ಪ್ರವರ್ದಮಾನಕ್ಕೆ ತರುವುದೂ ಮುಖ್ಯವಾಗಿದೆ ಎಂದು ತಿಳಿಸಿದರು. ಇದೇ ವೇಳೆ ರಂಗಮಂದಿರದಲ್ಲಿ ಕಾರು ಪಾರ್ಕಿಂಗ್​ ಮತ್ತು ಪಾಕಶಾಲೆಯನ್ನು ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರು ಉದ್ಘಾಟಿಸಿದರು.

ಮಂಜುನಾಥ ಎಲ್​.ಬಡಿಗೇರ ಅವರ ನಿರ್ದೇಶನದಲ್ಲಿ ಮಂಡ್ಯ ಜಿಲ್ಲೆಯ ದೊಡ್ಡಬ್ಯಾಡರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ ಮಕ್ಕಳು ಕರ್ಣ ಅರ್ಜುನರ ಕಾಳಗ ಮೂಡಲಪಾಯ ಯಕ್ಷಗಾನ ಪ್ರಸಂಗವನ್ನು ಪ್ರಸ್ತುತಪಡಿಸಿದರು.

ಕಾರ್ಯಕ್ರಮದಲ್ಲಿ ಸೀಗೆಹಳ್ಳಿ ಮಂಜಣ್ಣ ಅವರನ್ನು ಸನ್ಮಾನಿಸಲಾಯಿತು.

ಜ್ಯೋತಿಪುರ ವೇಣು, ಬಿದರಹಳ್ಳಿ ನಟರಾಜು, ಬೊಮ್ಮೆನಹಳ್ಳಿ ಮುನಿರಾಜಗೌಡ, ಹುಸ್ಕೂರ್​ ಸುಬ್ಬಣ್ಣ, ಜನಪದರು ಸಾಂಸತಿಕ ವೇದಿಕೆ ಕಾರ್ಯದರ್ಶಿಗಳಾದ ಸಿದ್ದೇಶ್ವರ ನನಸುಮನೆ, ಎಂ.ಸುರೇಶ್​, ವೇಂಕಟಾಚಲಪತಿ, ಕೆ.ಸುರೇಶ, ಶಿವಕುಮಾರ್​ ಕಾಟಂನಲ್ಲೂರು, ಶಿವಕುಮಾರ್​ ತಾವರೆಕೆರೆ, ಬಸವರಾಜು, ಮುನಿರಾಜು ಬಿದಿರೇ ಅಗ್ರಹಾರ, ಕೆ.ರಾಜಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net