ಸಂವಿಧಾನ ಉಳಿಸುವುದು ಎಲ್ಲರ ಕರ್ತವ್ಯ

NDG 11-1
ನಿಡಗುಂದಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ 134ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಸಚಿವ ಶಿವಾನಂದ ಪಾಟೀಲ ಉದ್ಘಾಟಿಸಿದರು. ಶಾಸಕ ಪ್ರಸಾದ ಅಬ್ಬಯ್ಯ, ರುದ್ರಮುನಿ ಶ್ರೀಗಳು ಇದ್ದರು.
Published on

ನಿಡಗುಂದಿ: ಡಾ. ಬಿ.ಆರ್. ಅಂಬೇಡ್ಕರ್ ಅವರು ವಿಶ್ವದಲ್ಲೇ ಮಾದರಿ ಹಾಗೂ ಅತ್ಯಂತ ಶ್ರೇಷ್ಠ ಸಂವಿಧಾನವನ್ನು ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ. ಭಾರತದಂತಹ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಅಂಬೇಡ್ಕರರು ಬರೆದಿರುವ ಸಂವಿಧಾನ ಉಳಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ಡಾ. ಬಿ.ಆರ್. ಅಂಬೇಡ್ಕರ್ ಜಯಂತ್ಯುತ್ಸವ ಸಮಿತಿ ಪಟ್ಟಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಡಾ. ಬಿ.ಆರ್. ಅಂಬೇಡ್ಕರ್ 134ನೇ ಜಯಂತ್ಯುತ್ಸವ ಹಾಗೂ ಅಂಬೇಡ್ಕರ್ ರತ್ನ ಪ್ರಶಸ್ತಿ ಪ್ರದಾನ, ಪ್ರತಿಭಾ ಪುರಸ್ಕಾರ, ತಾಲೂಕು ಛಲವಾದಿ ಮಹಾಸಭಾ ಉದ್ಘಾಟನೆ ಹಾಗೂ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಡಾ. ಬಿ.ಆರ್. ಅಂಬೇಡ್ಕರ್ ನೀಡಿದ ಸಂವಿಧಾನ ಮಂತ್ರದಿಂದ ದೇಶದ ಎಲ್ಲ ವರ್ಗದ ಜನರು ಸಾಮರಸ್ಯದಿಂದ ಬದುಕುತ್ತಿದ್ದಾರೆ. ಆದರೆ, ಕೆಲವರು ಸಂವಿಧಾನ ತಿದ್ದುವ ಹಾಗೂ ಬದಲಿಸುವ ಮಾತುಗಳನ್ನು ಆಡುತ್ತಿದ್ದರೂ ನಿಮ್ಮೆಲ್ಲರ ಧ್ವನಿ ಒಗ್ಗಟ್ಟಾಗಿರುವವರೆಗೆ ಅದು ಸಾಧ್ಯವಿಲ್ಲ. ಸೂರ್ಯ ಚಂದ್ರರಿರುವವರೆಗೂ ಡಾ. ಅಂಬೇಡ್ಕರ್ ಅವರ ತತ್ವ ಆಚಾರ, ವಿಚಾರಗಳು ನಮ್ಮನ್ನು ಮುನ್ನಡೆಸುತ್ತವೆ ಎಂದರು.

ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಅಂಬೇಡ್ಕರರು ವಿಶ್ವಕ್ಕೆ ಮಾದರಿಯಾದ ಸಂವಿಧಾನ ನೀಡಿದ್ದಾರೆ. 18 ವರ್ಷ ಪೂರ್ಣಗೊಂಡ ಭಾರತೀಯ ಎಲ್ಲ ಪ್ರಜೆಗಳಿಗೆ ಮತದಾನದ ಹಕ್ಕು ನೀಡುವ ಮೂಲಕ ಸಮಾನ ಅವಕಾಶ ಕಲ್ಪಿಸಿದ್ದಾರೆ. ಶಿಕ್ಷಣದಿಂದ ಮಾತ್ರ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂಬುದನ್ನು ಜಗತ್ತಿಗೆ ತೋರಿಸಿದ್ದಾರೆ. ಯುವ ಜನತೆ ಅವರ ಆದರ್ಶಗಳನ್ನು ಪಾಲಿಸಬೇಕಿದೆ ಎಂದರು.

ವಿಶ್ರಾಂತ ಉಪನ್ಯಾಸಕ ಎಚ್.ಟಿ. ಪೋತೆ ಮಾತನಾಡಿ, ದೇಶಕ್ಕೆ ಉತ್ತಮ ಸಂವಿಧಾನ ಗ್ರಂಥ ನೀಡಿ 140 ಕೋಟಿ ಜನರ ಬದುಕಿಗೆ ಆಸರೆಯಾಗಿರುವ ಹಾಗೂ ಅವರ ಸಂವಿಧಾನದ ಆಧಾರದಲ್ಲಿ ಬದುಕುತ್ತಿರುವ ಅನೇಕರು ಅವರ ಜಯಂತಿ ಆಚರಿಸದೆ ಅವರನ್ನು ದಲಿತರಿಗೆ ಮಾತ್ರ ಸೀಮಿತವಾಗಿಸಿದ್ದು ನೋವಿನ ಸಂಗತಿ ಎಂದರು.

ಮಾಜಿ ಶಾಸಕ ರಾಜು ಆಲಗೂರ, ಉಪನ್ಯಾಸಕಿ ಸುಜಾತಾ ಚಲವಾದಿ, ರಾಜು ಕೂಚಬಾಳ, ಎಚ್.ಎಚ್. ದೊಡಮನಿ ಮಾತನಾಡಿದರು.

ರುದ್ರೇಶ್ವರ ಸಂಸ್ಥಾನ ಮಠದ ರುದ್ರಮುನಿ ಶ್ರೀಗಳು ಆಶೀರ್ವಚನ ನೀಡಿದರು.

ಶಿಕ್ಷಣ ಪ್ರೇಮಿ ಸಿದ್ದಣ್ಣ ನಾಗಠಾಣ, ಅಭಿಷೇಕ ಚಕ್ರವರ್ತಿ, ಸುಭಾಸ ನಾಟೇಕಾರ, ಚಿದಾನಂದ ಕಾಂಬಳೆ, ಸಿ.ಜಿ. ವಿಜಯಕರ, ಚಂದ್ರಕಾಂತ ಸಿಂಗೆ, ಸಂಗಮೇಶ ಬಳಿಗಾರ, ಎಂ.ಎಂ. ಮುಲ್ಲಾ, ಪ.ಪಂ. ಮುಖ್ಯಾಧಿಕಾರಿ ವಿರೇಶ ಹಟ್ಟಿ, ಇಒ ವೆಂಕಟೇಶ ವಂದಾಲ, ಚಂದ್ರು ನುಗ್ಗಲಿ, ಬಿ.ಟಿ. ಗೌಡರ, ಶ್ಯಾಮ ಪಾತ್ರದ, ಜಯಂತ್ಯುತ್ಸವ ಸಮಿತಿ ಮುಖಂಡರಾದ ಶೇಖರ ದೊಡಮನಿ, ಸಿಂಧೂರ ಭೈರವಾಡಗಿ, ಪ್ರಶಾಂತ ಚಲವಾದಿ, ಬಸವರಾಜ ಆಲಕೊಪ್ಪರ, ಕಾಮೇಶ ಬಜಂತ್ರಿ, ಡೊಂಗ್ರಿ ಬಜಂತ್ರಿ, ಬಸವರಾಜ ನಿಡಗುಂದಿ ಇತರರಿದ್ದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಾಧಕರಿಗೆ ಡಾ. ಬಿ.ಆರ್. ಅಂಬೇಡ್ಕರ್ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಾಮೂಹಿಕ ವಿವಾಹದಲ್ಲಿ ಎಂಟು ನವದಂಪತಿಗೆ ಗಣ್ಯರು ಪುಷ್ಪಗಳಿಂದ ಹಾರೈಸಿದರು. ಇದಕ್ಕೂ ಮುನ್ನ ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರ ಮೆರವಣಿಗೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net