

ಚಿಕ್ಕೋಡಿ ಗ್ರಾಮೀಣ: ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ಜೊಲ್ಲೆ ಗ್ರೂಪ್‌ನ ನಣದಿಯ ಶಿವಶಂಕರ ಜೊಲ್ಲೆ ಇಂಗ್ಲಿಷ್ ಮೀಡಿಯಂ ಪಬ್ಲಿಕ್ ಶಾಲೆಯಲ್ಲಿ ಬುಧವಾರ ಕಾರ್ಗಿಲ್ ವಿಜಯ ದಿವಸ ಆಚರಿಸಲಾಯಿತು.
ಪ್ರಾಚಾರ್ಯೆ ಗೀತಾ ನಾಯ್ಡು ಮಾತನಾಡಿ, ಕಾರ್ಗಿಲ್ ಯುದ್ಧ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ನಡೆದ ಸಶಸ್ತ್ರ ಸಂಘರ್ಷ. ಪಾಕಿಸ್ತಾನವನ್ನು ಸೋಲಿಸಿ ಭಾರತೀಯ ಯೋಧರು ವಿಜಯ ಪತಾಕೆ ಹಾರಿಸಿದ್ದಾರೆ. ಪಾಕ ಸೈನಿಕರು ಅಕ್ರಮವಾಗಿ ವಶಪಡಿಸಿಕೊಂಡಿದ್ದ ಕಾರ್ಗಿಲ್ ಪ್ರದೇಶವನ್ನು ಆಪರೇಷನ್ ವಿಜಯ ಎಂಬ ಕಾರ್ಯಾಚರಣೆಯ ಮೂಲಕ ಜು.26 ರಂದು ಭಾರತ ತನ್ನ ವಶಕ್ಕೆ ತೆಗೆದುಕೊಂಡ ನೆನಪಿಗೆ ಕಾರ್ಗಿಲ್ ದಿವಸ್ ಆಚರಿಸಲಾಗುತ್ತಿದೆ. ದೇಶದ ಯೋಧರು ಜಗತ್ತಿಗೆ ತಮ್ಮ ಸಾಮರ್ಥ್ಯ ಮೆರೆದ ದಿನವಿದು. ವೀರ ಯೋಧರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿರುವುದಕ್ಕೆ ಗೌರವ ನಮನ ಸಲ್ಲಿಸುವುದು ಸಂಪ್ರದಾಯ ಎಂದರು.
ವಿದ್ಯಾರ್ಥಿಗಳು ದೇಶಭಕ್ತಿ, ಸೈನಿಕರ ಬಗ್ಗೆ ಅಭಿಮಾನ ಹೊಂದಬೇಕು. ರಾಷ್ಟ್ರದ ವಿಕಾಸಕ್ಕಾಗಿ ಎಲ್ಲರು ಒಗ್ಗೂಡಬೇಕು. ರಾಷ್ಟ್ರದ ಐಕ್ಯತೆ ಹಾಗೂ ಸಮಗ್ರತೆ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ. ದೇಶದ ಇತಿಹಾಸದ ಬಗ್ಗೆ ಹೆಮ್ಮೆ ಪಡಬೇಕು ಎಂದರು.
ವಿದ್ಯಾರ್ಥಿಗಳು ಭಾಷಣ, ನೃತ್ಯ, ದೇಶಭಕ್ತಿ ಗೀತೆ, ಹನಿಗವನ ಹೇಳುವ ಮೂಲಕ ದೇಶಾಭಿಮಾನ ಮೆರೆದರು. ಉಪಪ್ರಾಚಾರ್ಯ ರಮಜಾನ್ ದಫೇದಾರ್, ಶಿಕ್ಷಕ ರಾಜು ಪವಾರ, ಸೌರಭ ಖೋತ, ಅಜಿಂಕ್ಯ ಐದಮಾಳಿ, ಅಮೃತಾಂಜಲಿ ಮಂಗಾವತೆ ಇತರರಿದ್ದರು.