ಪ್ರತಿಯೊಬ್ಬರೂ ಮಾನಸಿಕ ಸ್ವಾಸ್ಥ್ಯ ಕಾಯ್ದುಕೊಳ್ಳುವುದು ಅತ್ಯಗತ್ಯ; ಕೆ.ಬಿ.ಪ್ರಸಾದ್

MDK04
Published on

ಮಡಿಕೇರಿ: ಪ್ರತಿಯೊಬ್ಬರೂ ಮಾನಸಿಕ ಸಮತೋಲನ ಕಾಯ್ದುಕೊಳ್ಳುವುದರ ಜತೆಗೆ ಮಾನಸಿಕ ಸ್ವಾಸ್ಥ್ಯ ಹಾಗೂ ದೈಹಿಕ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಬಿ.ಪ್ರಸಾದ್ ತಿಳಿಸಿದರು.


ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ’ಎಲ್ಲರಿಗೂ ಮಾನಸಿಕ ಆರೋಗ್ಯ ಮತ್ತು ಯೋಗ ಕ್ಷೇಮವನ್ನು ಜಾಗತಿಕ ಆದ್ಯತೆಯನ್ನಾಗಿ ಮಾಡಿ’ ಎಂಬ ಘೋಷಣೆಯೊಂದಿಗೆ ಗುರುವಾರ ಆಯೋಜಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಪ್ರತಿಯೊಬ್ಬರೂ ಮಾನಸಿಕವಾಗಿ ಒಂದಲ್ಲ ಒಂದು ರೀತಿಯ ಚಟುವಟಿಕೆ ಹಾಗೂ ಕಲಿಕೆಯಲ್ಲಿ ಮುಂದಿರುತ್ತಾರೆ. ಇದು ಅವರ ಮಾನಸಿಕ ಶಕ್ತಿ ಮತ್ತು ಆಸಕ್ತಿ ತೋರಿಸುತ್ತದೆ. ಸಮಾಜದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದೆ. ಕೆಲವೊಂದು ಪ್ರಕರಣಗಳನ್ನು ಹತ್ತಿರದಿಂದ ಅವಲೋಕಿಸಿದಾಗ ಅಪರಾಧ ಮಾಡಬೇಕೆಂಬ ಉದ್ದೇಶದಿಂದ ಕೆಲವೊಂದು ಅಪರಾಧಗಳು ನಡೆದಿರುವುದಿಲ್ಲ. ಬದಲಾಗಿ ಆ ಕ್ಷಣದಲ್ಲಿ ಉದ್ವೇಗಕ್ಕೆ ಒಳಗಾಗಿ ಅಪರಾಧಗಳಲ್ಲಿ ತೊಡಗಿಕೊಂಡಿರುತ್ತಾರೆ. ಇದಕ್ಕೆ ಮುಖ್ಯ ಕಾರಣ ಮನಸ್ಸಿನ ಸ್ಥಿತಿ ಎಂದು ತಿಳಿಸಿದರು.


ಪ್ರತಿಯೊಬ್ಬರೂ ದಿನನಿತ್ಯದ ಜೀವನದಲ್ಲಿ ದೈಹಿಕ ಆರೋಗ್ಯದಿಂದ ಇರುವುದರ ಜತೆಗೆ ಮಾನಸಿಕ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಜೀವನವು ಮುಖ್ಯ ಘಟ್ಟವಾಗಿದ್ದು, ಪ್ರತಿಯೊಬ್ಬರೂ ಕಲಿಕಾ ಚಟುವಟಿಕೆ ಹಾಗೂ ಇನ್ನಿತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಇದೊಂದು ಸುವರ್ಣಾವಕಾಶವಾಗಿದೆ. ಉನ್ನತ ಶಿಕ್ಷಣ ಪಡೆದು ತಮ್ಮ ಗುರಿ ಸಾಧಿಸುವಂತಾಗಬೇಕು ಎಂದು ಹೇಳಿದರು.


ಅನಗತ್ಯ ವಿಷಯಗಳನ್ನು ಮನಸ್ಸಿನಿಂದ ತೆಗೆದು ಹಾಕಬೇಕು. ಯುವ ಪೀಳಿಗೆಯವರು ಪ್ರಸ್ತುತ ಮಾದಕ ವ್ಯಸನಕ್ಕೆ ತುತ್ತಾಗುತ್ತಿದ್ದಾರೆ. ಆ ನಿಟ್ಟಿನಲ್ಲಿ ಮಾದಕ ವ್ಯಸನದಿಂದ ದೂರವಿರಬೇಕು. ಇದರಿಂದ ವಿದ್ಯಾರ್ಥಿಗಳು ತಮ್ಮ ಗುರಿ ಸೇರಲು ಸಾಧ್ಯ ಎಂದು ಹೇಳಿದರು.


ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ಎನ್.ಆನಂದ್ ಮಾತನಾಡಿ, ಪ್ರತಿಯೊಬ್ಬರ ಆರೋಗ್ಯವು ಉತ್ತಮವಾಗಿರಬೇಕಾದರೆ ಮಾನಸಿಕ ಆರೋಗ್ಯವು ಬಹಳ ಮುಖ್ಯ. ಇದರಿಂದ ದೈಹಿಕವಾಗಿ ಸದೃಢರಾಗಲು ಸಾಧ್ಯ. ಎಲ್ಲರಿಗೂ ಆರೋಗ್ಯ ಎಂಬ ವಾಗ್ವಾನಕ್ಕೆ ದೇಶವು ಬದ್ಧವಾಗಿದೆ. ಆರೋಗ್ಯವೆಂದರೆ, ಕೇವಲ ದೈಹಿಕ ಆರೋಗ್ಯವಲ್ಲ. ದೈಹಿಕ, ಮಾನಸಿಕ, ಸಾಮಾಜಿಕವಾಗಿ ಸುಸ್ಥಿರವಾಗಿರುವುದೇ ಆರೋಗ್ಯ ಎಂದು ತಿಳಿಸಿದರು.’


ಮಾನಸಿಕ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳುವುದು ಮುಖ್ಯ. ಆ ನಿಟ್ಟಿನಲ್ಲಿ ವ್ಯಾಯಾಮ, ಓದುವ ಹವ್ಯಾಸ ಹೀಗೆ ಹಲವು ಚಟುವಟಿಕೆಗಳಲ್ಲಿ ಪ್ರತಿಯೊಬ್ಬರೂ ತೊಡಗಿಸಿಕೊಳ್ಳುವುದರಿಂದ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬಹುದು. ಮಾನಸಿಕ ಖಿನ್ನತೆಯಿಂದ ಶೇ.೧೦ ರಷ್ಟು ಜನರು ಬಳಲುತ್ತಿದ್ದಾರೆ. ಇದರಿಂದ ಹಲವಾರು ಪರಿಣಾಮಗಳು ಬೀರುತ್ತವೆ. ಆ ನಿಟ್ಟಿನಲ್ಲಿ ಒತ್ತಡವನ್ನು ಕಡಿಮೆ ಮಾಡಿ ಲವಲವಿಕೆಯಿಂದ ಪ್ರತಿಯೊಂದು ಚಟುವಟಿಕೆಗಳಲ್ಲಿ ತೊಡಗಿಕೊಂಡು ಮಾನಸಿಕ ಆರೋಗ್ಯವನ್ನು ಪ್ರತಿಯೊಬ್ಬರೂ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.


ಮನೋವೈದ್ಯ ಡಾ.ಡೇವಿನ್ ಲಿನೇಕರ್ ಕರ್ಕಡ ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಡಾ.ಲಕ್ಷ್ಮೀದೇವಿ, ಹಾಗೂ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗದ ಸಿಬ್ಬಂದಿಗಳು, ಇತರರು ಇದ್ದರು.

ವಿಕಲಚೇತನರು ಹಾಗೂ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವವರನ್ನು ಕಂಡು ಬಂದರೆ ದೂ.ಸಂ.೦೮೨೭೨-೨೯೫೮೨೮ ನ್ನು ಸಂಪರ್ಕಿಸಿ ಮಾಹಿತಿ ನೀಡಬಹುದು. ಮಾನಸಿಕ ಆರೋಗ್ಯವನ್ನು ಕಾಪಾಡಿಕೊಂಡು ನಮ್ಮ ಜೀವನ ಶೈಲಿಯಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳುವುದರಿಂದ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ.
ವಿಮಲ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net