

ರಾಯಚೂರು ಕೆಪಿಸಿಸಿ ಅಧ್ಯಕ್ಷ ಬದಲಾವಣೆ ಪಕ್ಷದ ವರಿಷ್ಟರು ನಿರ್ಧರಿಸುತ್ತಾರೆ ಹೊರತು ನಾವು ಚರ್ಚೆ ಮಾಡಿದರೆ ಆಗುವದಿಲ್ಲ , ಪ್ರಸ್ತುತ ನಮ್ಮ ಸ್ಥಾನ ಉಳಿದರೆ ಸಾಕಾಗಿದೆಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ನಗರದ ಸಣ್ಣ ನೀರಾವರಿ ಸಚಿವರ ನಿವಾಸದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಒಳ್ಳೇ ರೀತಿ ಆಡಳಿತ ನೀಡುತ್ತಿದೆ. ಜನರಿಗೆ ಯೋಜನೆಗಳು ತಲುಪುತ್ತಿವೆ. ಸಚಿವ ಸಂಪೂಟ ಬದಲಾವಣೆ ಹೇಳುವ ಅಧಿಕಾರ ನಮಗೆ ಇಲ್ಲ. ಪಕ್ಷ ವರಿಷ್ಠರನ್ನು ಕೇಳಿದರೆ ಗೊತ್ತಾಗುತ್ತದೆ . ಮಾಜಿ ಸಚಿವ ಎಚ್.ವಿಶ್ವನಾಥ ಅವರು ನಮ್ಮ ಪಕ್ಷದವರೇ ಅಲ್ಲ. ಮುಖ್ಯಮಂತ್ರಿ ಬದಲಾಗುತ್ತಾರೆ ಎಂದು ಹೇಳಲು ಅವರಾರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಮುಖ್ಯಮಂತ್ರಿ ಆಗುತ್ತಾರೆ ಇಲ್ಲವೋ ಎನ್ನುವುದನ್ನು ಅವರೇ ಹೇಳಬೇಕು. ಯಾರಾರು ಮಾತನಾಡಿದರೆ ಬದಲಾಗದು ಎಂದರು.
ಜಾತಿ ಸಮೀಕ್ಷೆ ಕುರಿತಂತೆ ವಿವಿಧ ಸಮೂದಾಯಗಳ ಆಕ್ಷೇಪದ ಹಿನ್ನಲೆಯಲ್ಲಿ ಮರು ಸಮೀಕ್ಷೆಗೆ ಪಕ್ಷದ ವರಿಷ್ಟರು ಸೂಚಿಸಿದ್ದಾರೆ. ಈ ಹಿಂದೆ 160 ಕೋಟಿ ರೂ ವ್ಯಯವಾಗಿದೆ. ಆದರೆ ಏಳು ಕೋಟಿ ಜನರ ಅಭಿಪ್ರಾಯವನ್ನು ಗೌರವಿಸುವದು ಮುಖ್ಯವಾಗುತ್ತದೆ. ಮರು ಸಮೀಕ್ಷೆ ಮಾಡಿದರೆ ತಪ್ಪೇನು ಇಲ್ಲ ಎಂದರು.
ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣಕ್ಕೆ ಅನುದಾನ ಕೊರತೆಯಿಲ್ಲ. ರಾಜ್ಯದಲ್ಲಿ 50 ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಲ್ಲಿ 30 ಪೂರ್ಣಗೊಂಡಿವೆ. 20 ಪ್ರಗತಿಯ ಹಂತದಲ್ಲಿವೆ. ರಾಯಚೂರಿನಲ್ಲಿ ರಿಂಗ್ ರೋಡ್ ನಿರ್ಮಾಣ ಮಾಡುವಪ್ರಸ್ತಾವನೆಯಿದೆ. ಇಲಾಖೆ ಹಂತದಲ್ಲಿ ಪರಿಶೀಲಿಸಿ ನಿರ್ಧರಿಸಲಾಗುತ್ತದೆ. ಜುರಾಲಾ ಯೋಜನೆಯಡಿ ಬಾಕಿಯಿರುವ ಸೇತುವೆ ನಿರ್ಮಾಣದ ಕುರಿತಂತೆ ಇಲಾಖೆ ಅಧಿಕಾರಿಗಳೊಂದಿಗೆ ನಿರ್ಧರಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು, ಸಂಸದ ಜಿ.ಕುಮಾರನಾಯಕ, ಮಹ್ಮದ ಶಾಲಂ ಇದ್ದರು.