

ಲೋಕೇಶ್ ಎಂ. ಐಹೊಳೆ ಜಗಳೂರು: ಕಳೆದೆರೆಡು ತಿಂಗಳಿಂದ ಸರ್ವರ್ ಸಮಸ್ಯೆ ಉಂಟಾಗಿ ಪಡಿತರದಾರರು ಮತ್ತು ನ್ಯಾಯಬೆಲೆ ಅಂಗಡಿಗಳ ಮಾಲೀಕರು ಧಾನ್ಯಕ್ಕಾಗಿ ಅಲೆದಾಡುವಂತಾಗಿದ್ದು, ದೀಪಾವಳಿ ಹಬ್ಬಕ್ಕೂ ಪಡಿತರ ಸಿಗುವುದು ಅನುಮಾನವಾಗಿದೆ.
ತಾಲೂಕಿನಲ್ಲಿ 99 ನ್ಯಾಯಬೆಲೆ ಅಂಗಡಿಗಳಿದ್ದು, ಅಂದಾಜು 43600 ಪಡಿತರದಾರರು ಇದ್ದಾರೆ. ಪಡಿತರ ವಿತರಣೆಯಲ್ಲಿನ ಅಕ್ರಮಗಳಿಗೆ ಕಡಿವಾಣ ಹಾಕಲು ಬಯೋಮೆಟ್ರಿಕ್ ಪದ್ಧತಿ ಅನುಷ್ಠಾನಗೊಳಿಸಿದ್ದು, ಈ ವ್ಯವಸ್ಥೆ ಪಡಿತರ ವಿತರಿಸುತ್ತಿದೆ. ಆದರೆ, ಇದಕ್ಕೆ ಪೂರಕವಾದ ತಾಂತ್ರಿಕ ವ್ಯವಸ್ಥೆ ರೂಪಿಸದ ಕಾರಣ ಸರ್ವರ್ ಪದೇಪದೆ ಕೈ ಕೊಡುತ್ತಿದೆ. ಇದರಿಂದ ಫಲಾನುಭವಿಗಳು ತೊಂದರೆ ಅನುಭವಿಸುವಂತಾಗಿದೆ.
ದಿನವಿಡಿ ಕಾಯಬೇಕು: ಪ್ರತಿನಿತ್ಯ ಬಯೋಮೆಟ್ರಿಕ್ ನೀಡಲು ತಾಲೂಕಿನ ನ್ಯಾಯಬೆಲೆ ಅಂಗಡಿಗಳ ಮುಂದೆ ನೂರಾರು ಪಡಿತರರು ತಮ್ಮ ದೈನಂದಿನ ಕೆಲಸ ಬಿಟ್ಟು ಸರದಿ ಸಾಲಿನಲ್ಲಿ ನಿಲ್ಲಬೇಕಿದೆ. ಇಷ್ಟಾದರೂ ದಿನಕ್ಕೆ ಐದಾರು ಕಾರ್ಡ್‌ದಾರರ ಬೆರಳಚ್ಚು ನೀಡಲು ಮಾತ್ರ ಸಾಧ್ಯವಾಗುತ್ತಿದೆ. ಉಳಿದವರು ಬಂದ ದಾರಿಗೆ ಸುಂಕವಿಲ್ಲದಂತೆ ಮನೆಗೆ ವಾಪಸ್ ಹೋಗುತ್ತಿದ್ದಾರೆ.
ಪಡಿತರ ಪಡೆಯಲು ಮುಂಜಾನೆ ಮನೆ ಬಿಟ್ಟವರು ಸಂಜೆವರೆಗೂ ನ್ಯಾಯಬೆಲೆ ಅಂಗಡಿ ಮುಂದೆ ನಿಲ್ಲುತ್ತಾರೆ. ಬಯೋಮೆಟ್ರಿಕ್ ಸಿಗದೇ ಉಪಹಾರ, ನೀರು ಇಲ್ಲದೆ ಮಧ್ಯಾಹ್ನದವರೆಗೂ ಕಾದರೂ ಪ್ರಯೋಜನವಾಗುತ್ತಿಲ್ಲ. ಈ ತಿಂಗಳು ಕೇವಲ ಎಂಟು ದಿನಗಳು ಮಾತ್ರ ಉಳಿದಿದ್ದು, ಅದರೊಳಗೆ ಆಗದಿದ್ದರೆ ತಿಂಗಳ ಆಹಾರ ಧಾನ್ಯ ಸಿಗುವುದಿಲ್ಲ ಎಂಬುದು ಮಹಿಳೆಯರು ಅಸಮಾಧಾನ.
ಬೆರಳಚ್ಚು ಸ್ವೀಕರಿಸುತ್ತಿಲ್ಲ: ಈವರೆಗೂ ರಾಷ್ಟ್ರೀಯ ಮಾಹಿತಿ ಕೇಂದ್ರದ (ಎನ್‌ಐಸಿ) ತಂತ್ರಾಂಶದ ಮೂಲಕ ಪಡಿತರ ವಿತರಿಸಲಾಗುತ್ತಿತ್ತು. ಸರ್ವರ್ ಸಮಸ್ಯೆಯಿಂದ ಅಂಗಡಿ ಮುಂದೆ ಸಾಲಾಗಿ ನಿಲ್ಲಬೇಕಾಗಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ಮತ್ತಷ್ಟು ಸಮಸ್ಯೆ ಬಿಗಡಾಯಿಸಿತ್ತು. ಪರಿಹಾರಕ್ಕಾಗಿ ಇಲಾಖೆ, ಕೆಎಸ್‌ಡಿಸಿ ಸಹಯೋಗದಲ್ಲಿ ಹೊಸ ತಂತ್ರಾಂಶದ ಕಾರ್ಯರೂಪಕ್ಕೆ ತಂದಿದೆ. ಆದರೆ, ತಂತ್ರಾಂಶದಲ್ಲಿನ ತಾಂತ್ರಿಕ ತೊಂದರೆಯಿಂದ ಕಾರ್ಡ್‌ದಾರರ ಬೆರಳಚ್ಚು ಸ್ವೀಕರಿಸುತ್ತಿಲ್ಲ. ಇದರಿಂದ ಕಳೆದ ಎರಡು ತಿಂಗಳಿಂದಲೂ ಪಡಿತರ ಪಡೆಯಲು ಸಾಧ್ಯವಾಗದೇ ಕಾರ್ಡ್‌ದಾರರು ಹೈರಾಣಾಗಿದ್ದಾರೆ.
ಇದು ಕೇವಲ ಒಂದು ತಾಲೂಕಿನ ಸಮಸ್ಯೆಯಲ್ಲ. ರಾಜ್ಯದ ಎಲ್ಲ ತಾಲೂಕುಗಳಲ್ಲೂ ಸರ್ವರ್ ತೊಂದರೆಯಾಗುತ್ತಿದೆ. ಹೊಸ ತಂತ್ರಾಂಶದಿಂದ ಸರ್ವರ್ ಕೈಕೊಡುತ್ತಿದೆ. ಒಂದೆರಡು ದಿನಗಳಲ್ಲಿ ಸಮಸ್ಯೆ ಪರಿಹರಿಸಲಾಗುತ್ತದೆ. ಸಾರ್ವಜನಿಕರು ಸಹಕರಿಸಬೇಕು. ಶಿವಪ್ರಕಾಶ್, ಆಹಾರ ನಿರೀಕ್ಷಕ, ಆಹಾರ ಇಲಾಖೆ. ಸರ್ಕಾರ ಬಡವರಿಗೆ ಉಚಿತವಾಗಿ ಆಹಾರ ಧಾನ್ಯ ನೀಡುತ್ತಿದೆ. ಆದರೆ, ಹೊಸ ಪದ್ಧತಿ ಜಾರಿಗೆ ತಂದು ಅಲೆಸುತ್ತಿರುವುದು ಎಷ್ಟು ಸರಿ?. ವಿಜಯದಶಮಿ ಹಬ್ಬದಲ್ಲೂ ಸಮಸ್ಯೆಯಾಗಿತ್ತು. ಅಕ್ಟೋಬರ್‌ನಲ್ಲೂ ನಮಗೆ ಸಿಕ್ಕಿಲ್ಲ. ಐದಾರು ದಿನಗಳಿಂದಲೂ ಅಂಗಡಿಗೆ ಓಡಾಡಿ ಸಾಕಾಗಿದೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಸಿ, ಪಡಿತರ ನೀಡಿ. ಮೀನಾಕ್ಷಮ್ಮ, ಫಲಾನುಭವಿ, ಜಗಳೂರು.