

ಮಹಾಲಿಂಗಪುರ: ವಿಜ್ಞಾನಿಗಳ ಬಹು ದೊಡ್ಡ ಅವಿಷ್ಕಾರ, ಪ್ರಾಮಾಣಿಕ ಪವಾಡ ವಿದ್ಯುತ್. ಅದು ಇಲ್ಲದೆ ಇಂದಿನ ಜೀವನ ಕಲ್ಪಿಸಿಕೊಳ್ಳುವುದು ಕಷ್ಟ ಎಂದು ಸ್ಥಳೀಯ ಹೆಸ್ಕಾಂ ಶಾಖಾಧಿಕಾರಿ ರಾಜೇಶ ಬಾಗೋಜಿ ಹೇಳಿದರು.
ಸ್ಥಳೀಯ ಎಪಿಎಂಸಿ ಗಣೇಶ ದೇವಸ್ಥಾನದ ಆವರಣದಲ್ಲಿ ಹೆಸ್ಕಾಂ ವತಿಯಿಂದ ಮಂಗಳವಾರ ಆಯೋಜಿಸಿದ್ದ ವಿದ್ಯುತ್ ವಿತರಣಾ ಮಾಸಾಚರಣೆ ಹಾಗೂ ಸುರಕ್ಷತಾ ಅಭಿಯಾನದಲ್ಲಿ ಅವರು ಮಾತನಾಡಿದರು.
ತುಂಡಾಗಿ ಬಿದ್ದ ವಿದ್ಯುತ್ ತಂತಿಗಳನ್ನು ಮುಟ್ಟಬೇಡಿರಿ. ವಿದ್ಯುತ್ ತಂತಿಯ ಹತ್ತಿರದ ಮರದ ರೆಂಬೆಗಳನ್ನು ಕಡಿಯಲು ಹೆಸ್ಕಾಂ ಸಂಪರ್ಕಿಸಬೇಕು. ವಿದ್ಯುತ್ ಕಂಬಗಳಿಗೆ ಸಾರ್ವಜನಿಕರು ಬಟ್ಟೆ ಒಣಗಿಸಲು ಹಾಕಬಾರದು. ಪ್ರಾಣಿಗಳನ್ನು ಕಟ್ಟಬಾರದು. ತಂತಿ ಬೇಲಿಗಳಿಗೆ ವಿದ್ಯುತ್ ಪ್ರವಹಿಸಬಾರದು. ವಿದ್ಯುತ್ ಮಾರ್ಗಗಳ ಕಡೆಗಳಲ್ಲಿ ಕಿಟಕಿ, ಬಾಲ್ಕನಿಗಳನ್ನು ನಿರ್ಮಿಸದೆ ವಿದ್ಯುತ್ ಜಾಲದಿಂದ ಸುರಕ್ಷಿತ ಅಂತರವಿರಬೇಕು. ಒದ್ದೆ ಕೈಗಳಿಂದ ಸ್ವಿಚ್ ಮುಟ್ಟಬಾರದು. ವಿದ್ಯುತ್ ಲೈನ್‌ಗಳ ಕೆಳಗೆ ಗಾಳಿ ಪಟ ಹಾರಿಸುವುದು, ಬ್ಯಾನರ್ ಬಂಟಿಂಗ್ಸ್ ಕಟ್ಟುವುದಾಗಲಿ, ಸಮೀಪದಿಂದ ಲೋಹದ ಸಾಮಾನುಗಳನ್ನು ಸಾಗಿಸುವುದಾಗಲಿ ಮಾಡಬಾರದೆಂದು ತಿಳಿಸಿದರು.
ವಿದ್ಯುತ್ ರಿಪೇರಿ ಕಾಲಕ್ಕೆ ಸರಬರಾಜು ಕಡಿತಗೊಳಿಸಬೇಕು. ಕಾಲ ಕಾಲಕ್ಕೆ ಸಲಕರಣೆಗಳ ನಿರ್ವಹಣೆ ಇರಲಿ. ಅನಧಿಕೃತವಾಗಿ ರಿಪೇರಿ ಅಥವಾ ಕಂಬಗಳನ್ನು ಹತ್ತುವುದಾಗಿ ಮಾಡಬಾರದು. ವಿದ್ಯುತ್ ಅವಘಡ ಸಂಭವಿಸಿದರೆ 1912 ಸಂಖ್ಯೆಗೆ ಕರೆ ಮಾಡಬೇಕೆಂದುತಿಳಿಸಿದರು.
ರನ್ನಬೆಳಗಲಿ ಸೆಕ್ಷನ್ ಆಫೀಸರ್ ಮಲ್ಲು ಕಂಬಾರ, ಹೆಸ್ಕಾಂ ಪವರಮ್ಯಾನ್‌ಗಳಾದ ಕೃಷ್ಣಾ ಡೊಂಬರ, ಪರಶುರಾಮ ಚಲವಾದಿ, ಸಂತೋಷ ಕುಟಗೋಳಿ, ಸಂತೋಷ ಆರಿ, ವಿಶ್ವನಾಥ್ ಸಕ್ಕರೆಪ್ಪಗೋಳ, ಮಹಾಂತೇಶ ಯರಗಟ್ಟಿ, ಹಣ್ಮಂತ ತೇಲಿ, ಕಿರಣ ಬಿರಾಜನವರ ಇತರರಿದ್ದರು.