ಆಹಾರದಲ್ಲಿ ಪೌಷ್ಟಿಕತೆ ನಿರೀಕ್ಷಿಸುವುದು ಕಷ್ಟಸಾಧ್ಯ

IMG-20240914-WA0205
ಅರಸೀಕೆರೆ ಗ್ರಾಮಾಂತರದ ಪನ್ನಸಮುದ್ರ ಗ್ರಾಮದಲ್ಲಿ ಪೋಷಣ್ ಮಾಸಾಚರಣೆ ಅಭಿಯಾನ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಶಂಕರಮೂರ್ತಿ, ವೇದಾನಂದ ಮೂರ್ತಿ, ಭಾಗ್ಯಮ್ಮ, ಮಂಜುನಾಥ್, ಭಾರತಿ, ರೇಣುಕಮ್ಮ, ನೀಲಾವತಿ, ರಾಧಮ್ಮ ಇತರರು ಇದ್ದರು
Published on

ಅರಸೀಕೆರೆ ಗ್ರಾಮಾಂತರ: ಆಧುನಿಕ ಯುಗದಿಂದ ನಾವು ತಿನ್ನುವ ಆಹಾರದಲ್ಲಿ ಪೌಷ್ಟಿಕತೆ ನಿರೀಕ್ಷಿಸುವುದು ಕಷ್ಟಸಾಧ್ಯ ಎಂದು ಬೆಳಗುಂಬ ಗ್ರಾಮ ಪಂಚಾಯಿತಿ ಅಧ್ಯಕ್ಷ ವೇದಾನಂದಮೂರ್ತಿ ಬೇಸರ ವ್ಯಕ್ತಪಡಿಸಿದರು.


ಕಸಬಾ ಹೋಬಳಿ ಪನ್ನಸಮುದ್ರ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಪೋಷಣ್ ಮಾಸಾಚರಣೆ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿ, ಗರ್ಭಿಣಿಯರು ಮತ್ತು ಬಾಣಂತಿಯರು ತಮ್ಮ ಆಹಾರದಲ್ಲಿ ಪೌಷ್ಟಿಕತೆಯನ್ನು ಕಾಪಾಡಿಕೊಂಡರೆ ಮಗುವಿನ ಆರೋಗ್ಯ ಕಾಪಾಡಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.


ನಾವು ತಿನ್ನುತ್ತಿರುವ ಆಹಾರದಲ್ಲಿ ಪೌಷ್ಟಿಕ ಹಾಗೂ ಗುಣಮಟ್ಟ ಇಲ್ಲದೆ ಇರುವುದರಿಂದ ಜನಿಸುವ ಮಕ್ಕಳಲ್ಲೂ ಅಪೌಷ್ಟಿಕತೆ ಸಮಸ್ಯೆ ಕಾಡುತ್ತಿದೆ. ಈ ಸಮಸ್ಯೆ ನಿವಾರಣೆಗೆ ಸ್ತ್ರೀಯರು ವಿಶೇಷವಾಗಿ ಗರ್ಭಿಣಿ ಮತ್ತು ಬಾಣಂತಿಯರು ಪೌಷ್ಟಿಕತೆ ಹೊಂದಿರುವ ಆಹಾರ ಸೇವನೆಗೆ ಗಮನ ಹರಿಸಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ವಿತರಣೆಯಾಗುವ ಪೌಷ್ಟಿಕ ಆಹಾರವನ್ನು ಎಲ್ಲ ಗರ್ಭಿಣಿ ಮತ್ತು ಬಾಣಂತಿಯರು ಸೇವಿಸಿದರೆ ಆರೋಗ್ಯವಂತ ಮಗು ಹಾಗೂ ಆರೋಗ್ಯಕರ ಸಮಾಜ ನಿರೀಕ್ಷಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.


ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಂಕರಮೂರ್ತಿ ಮಾತನಾಡಿ, ಗರ್ಭಿಣಿಯರು ಹಾಗೂ ಬಾಣಂತಿಯರಲ್ಲಿ ಉತ್ತಮ ಆರೋಗ್ಯ ಕಾಪಾಡುವ ಉದ್ದೇಶದಿಂದ ಸರ್ಕಾರ ಪೋಷಣ್ ಮಾಸಾಚರಣೆ ಅಭಿಯಾನವನ್ನು ಹಮ್ಮಿಕೊಂಡಿದೆ ಎಂದು ತಿಳಿಸಿದರು.


ಬಾಲ್ಯ ವಿವಾಹ ತಡೆ ಕಾಯ್ದೆ ಜಾರಿಯಲ್ಲಿರುವುದರಿಂದ ಮಹತ್ವವನ್ನು ಎಲ್ಲರೂ ಅರಿಯಬೇಕು, ಮನೆ ಮತ್ತು ಶಾಲೆಗಳಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಮೊಬೈಲ್ ಫೋನ್ ಸಿಗದಂತೆ ಹಾಗೂ ಹೆಚ್ಚು ಸಮಯ ಅವರು ಮೊಬೈಲ್‌ನಲ್ಲೇ ಕಾಲ ಕಳೆಯದಂತೆ ಎಚ್ಚರಿಕೆ ವಹಿಸಬೇಕು, ಬಾಲ್ಯ ವಿವಾಹಕ್ಕೆ ಪ್ರಚೋದನೆ ನೀಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲು ಕಾನೂನಿನಲ್ಲಿ ಅವಕಾಶವಿದೆ, ಶಾಲಾ ಕಾಲೇಜುಗಳಲ್ಲಿ ಬಾಲ್ಯ ವಿವಾಹದ ದುಷ್ಪರಿಣಾಮದ ಬಗ್ಗೆ ಹೆಚ್ಚಿನ ಮಾಹಿತಿ ಒದಗಿಸಬೇಕು ಎಂದು ತಿಳಿಸಿದರು.


ಬೆಳಗುಂಬ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಭಾಗ್ಯಮ್ಮ, ಸಂಯೋಜಕ ಮಂಜುನಾಥ್, ಇಲಾಖೆ ಮೇಲ್ವಿಚಾರಕರಾದ ಭಾರತಿ, ರೇಣುಕಮ್ಮ, ಲೀಲಾವತಿ, , ರಾಧಮ್ಮ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net