

ಹುಬ್ಬಳ್ಳಿ : ರಾಜ್ಯದ ಮೂರು ಕ್ಷೇತ್ರಗಳಲ್ಲಿ ನಡೆಯುತ್ತಿರುವ ಉಪ ಚುನಾವಣೆ ಹಾಗೂ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಂತರ ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇರುವುದು ಕಷ್ಟವೆಂದು ಆ ಪಕ್ಷದ ಶಾಸಕರೇ ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ ಎಂದು ಮಾಜಿ ಉಪ ಮುಖ್ಯಮಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ನಗರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮುಳುಗುವ ಹಡಗು. ಯಾವೊಬ್ಬ ರಾಜಕಾರಣಿಯೂ ಆ ಪಕ್ಷಕ್ಕೆ ವಲಸೆ ಹೋಗಿ ತಮ್ಮ ರಾಜಕೀಯ ಜೀವನ ಹಾಳು ಮಾಡಿಕೊಳ್ಳುವುದಿಲ್ಲ ಎಂದರು.
ಶಾಸಕ ಎಸ್.ಟಿ. ಸೋಮಶೇಖರ ಅತಂತ್ರವಾಗಿದ್ದಾರೆ. ಅವರು ಕಾಂಗ್ರೆಸ್ನಲ್ಲಿಯೂ ಇಲ್ಲ, ಬಿಜೆಪಿಯಲ್ಲಿ ತಾಂತ್ರಿಕವಾಗಿ ಇದ್ದರೂ, ನಮ್ಮ ಪಕ್ಷದಿಂದ ಒಂದು ಕಾಲು ಹೊರಗೆ ಇಟ್ಟಿದ್ದಾರೆ. ಹೀಗಾಗಿ, ಬಿಜೆಪಿಯ 8 ಶಾಸಕರು ಕಾಂಗ್ರೆಸ್ ಸೇರುತ್ತಾರೆ ಎಂಬ ಅವರ ಹೇಳಿಕೆಗೆ ಮಹತ್ವ ಕೊಡುವ ಅಗತ್ಯವಿಲ್ಲ ಎಂದರು.
ದೇಶದ 20ಕ್ಕೂ ಹೆಚ್ಚು ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ಇದೆ. ಎಸ್.ಟಿ. ಸೋಮಶೇಖರ ಅವರ ಹೇಳಿಕೆಯಿಂದ ಬಿಜೆಪಿಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ಎಂದು ತಿಳಿಸಿದರು.
ಉಪ ಚುನಾವಣೆ ನಡೆಯುತ್ತಿರುವ ಮೂರೂ ಕ್ಷೇತ್ರದಲ್ಲಿ ಎನ್ಡಿಎ ಅಭ್ಯರ್ಥಿಗಳ ಗೆಲುವು ಖಚಿತ. ಶಿಗ್ಗಾಂವಿ ಕ್ಷೇತ್ರದಲ್ಲಿಯೂ ಭರತ್ ಬಸವರಾಜ ಬೊಮ್ಮಾಯಿ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಉಪ ಚುನಾವಣೆಯಲ್ಲಿ ಕುಟುಂಬ ರಾಜಕಾರಣ, ಜಾತಿ, ಪ್ರಾದೇಶಿಕ ಸಮಸ್ಯೆಗಳು ಲೆಕ್ಕಕ್ಕೆ ಬರುವುದಿಲ್ಲ. ಇಲ್ಲಿ ಗೆಲುವು ಮಾತ್ರ ಲೆಕ್ಕಕ್ಕೆ ಬರುತ್ತದೆ. ಎಲ್ಲ ಆಯಾಮಗಳಿಂದ ಅಧ್ಯಯನ ಮಾಡಿಯೇ ಭರತ್ ಬಸವರಾಜ ಬೊಮ್ಮಾಯಿ ಅವರಿಗೆ ಟಿಕೆಟ್ ನೀಡಲಾಗಿದೆ ಎಂದು ಹೇಳಿದರು.