ಹೊಸ ಮುಖಕ್ಕೆ ಮಣೆ ಬಿಜೆಪಿಯಲ್ಲಿ ಸಾಮಾನ್ಯ : ಪ್ರತಾಪ್ ಸಿಂಹ ಟಿಕೆಟ್ ಕುರಿತು ಡಾ.ಸಿ.ಎನ್. ಅಶ್ವಥ್ ನಾರಾಯಣ್ ಅಚ್ಚರಿ ಹೇಳಿಕೆ

Ashwath narayana
Published on

ಮೈಸೂರು: ಹೊಸ ಮುಖಕ್ಕೆ ಮಣೆ ಹಾಕುವುದು ಬಿಜೆಪಿಯಲ್ಲಿ ಸಾಮಾನ್ಯ. ಹೊಸ ಚಿಗುರು, ಹಳೆ ಬೇರು ಎಂಬುದು ನಡೆಯುತ್ತಲೇ ಇರುತ್ತದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವಥ್ ನಾರಾಯಣ್ ಹೇಳಿದರು.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಮೈಸೂರು ರಾಜಮನೆತನದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಕಣಕ್ಕಿಳಿಸುವ ಕುರಿತು ನಡೆಯುತ್ತಿರುವ ರಾಜಕೀಯ ಚರ್ಚೆ ಕುರಿತು ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಈ ರೀತಿ ಪ್ರತಿಕ್ರಿಯಿಸಿದರು.

ರಾಜಕೀಯದಲ್ಲಿ ಇದೇ ನಿಶ್ಚಿತ ಎಂದು ಹೇಳಲು ಸಾಧ್ಯವಿಲ್ಲ. ಎಲ್ಲರನ್ನೂ ಉಳಿಸಿಕೊಂಡು, ಬೆಳೆಸಿಕೊಂಡು ಹೋಗಬೇಕು. ರಾಜಕೀಯದಲ್ಲಿ ಯಾರಿಗೆ ಏನು ದೊರೆಯುತ್ತದೆ ಎಂದು ಯಾವುದನ್ನೂ ನಿಶ್ಚಿತವಾಗಿ ಹೇಳಲು ಸಾಧ್ಯವಿಲ್ಲ. ಪಕ್ಷದ ಪಾರ್ಲಿಮೆಂಟರಿ ಬೋರ್ಡಿನಲ್ಲಿ ಏನಾದರೂ ಆಗಬಹುದು. ಅಲ್ಲಿಯ ತನಕ ಎಲ್ಲರೂ ಕಾಯಬೇಕಾಗುತ್ತದೆ. ಸದ್ಯಕ್ಕೆ ನಾನು ಈ ಬಗ್ಗೆ ಮಾತನಾಡಲ್ಲ. ಪೊಲಿಟಿಕ್ಸ್ ತುಂಬಾ ಡೈನಾಮಿಕ್ ಆಗಿರುತ್ತದೆ ಎಂದು ಹೇಳಿದರು.

ಜಯದೇವ ಹೃದ್ರೋಗ ಸಂಸ್ಥೆ ನಿವೃತ್ತ ನಿರ್ದೇಶಕ ಡಾ. ಸಿ.ಎನ್.ಮಂಜುನಾಥ್‌ರನ್ನು ರಾಜಕೀಯಕಕ್ಕೆ ಕರೆ ತರುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸುವಂತೆ ಡಾ.ಸಿ.ಎನ್. ಮಂಜುನಾಥ್ ಅವರಿಗೆ ಆಹ್ವಾನ ನೀಡಿದ್ದೇವೆ, ಅದರಲ್ಲಿ ಎರಡು ಮಾತಿಲ್ಲ. ಆದರೂ ದೊಡ್ಡವರ ಮಟ್ಟದಲ್ಲಿ ಏನು ನಿರ್ಧರಿಸುತ್ತಾರೆ ನನಗೆ ಗೊತ್ತಿಲ್ಲ. ಪಾರ್ಲಿಮೆಂಟರಿ ಬೋರ್ಡಿನಲ್ಲಿ ಈ ಕುರಿತು ಚರ್ಚೆ ಆಗಲಿದೆ. ರಾಜಕೀಯದಲ್ಲಿ ಯಾರಿಗೂ ಬಾಗಿಲು ಮುಚ್ಚುವುದಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net