

ಗೋಣಿಕೊಪ್ಪ: ಹಿಂದೆ ಕೊಡವ ಸಮಾಜಗಳು ಮದುವೆ ಸಮಾರಂಭಗಳಿಗೆ ವೇದಿಕೆ ಕಲ್ಪಿಸುವುದಕ್ಕೆ ಮಾತ್ರ ಸೀಮಿತವಾಗಿದ್ದವು. ಆದರೆ ಈಗ ಹಬ್ಬಗಳನ್ನು ಸಾಮೂಹಿಕವಾಗಿ ಆಚರಿಸುವ ಮೂಲಕ ಮಕ್ಕಳಿಗೂ ಸಂಸ್ಕೃತಿಯ ಬಗ್ಗೆ ಅಭಿಮಾನ ಹಾಗೂ ಅರಿವು ಮೂಡಿಸುತ್ತಿರುವುದು ಪ್ರಶಂಸನೀಯ ಎಂದು ಕೊಡಗು ಜಿಲ್ಲಾ ಕೇಂದ್ರೀಯ ಬ್ಯಾಂಕಿನ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಅಭಿಪ್ರಾಯಪಟ್ಟರು.
ಪೊನ್ನಂಪೇಟೆಯಲ್ಲಿ ಕೊಡವ ಹಿತಾರಕ್ಷಣಾ ಬಳಗ ಕ್’ಗ್ಗಟ್ಟ್ ನಾಡ್, ಪೊನ್ನಂಪೇಟೆ ಆಶ್ರಯದಲ್ಲಿ ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಶನಿವಾರ ಆಯೋಜಿಸಿದ್ದ ಕಕ್ಕಡ ಪದ್‌ನೆಟ್ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಸ್ಕೃತಿಯ ಬೇರಾಗಿರುವ ಭತ್ತದ ಕೃಷಿಯಲ್ಲಿ ನಿರಾಸಕ್ತಿ ತಾಳಿದ್ದು ಕೊಡಗಿನಲ್ಲಿ 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿದ್ದ ಕೃಷಿ, ಇದೀಗ 19 ಸಾವಿರ ಹೆಕ್ಟೇರ್‌ಗೆ ಕುಸಿತವಾಗಿರುವ ವರದಿ ಅತ್ಯಂತ ಆತಂಕಕಾರಿ ಎಂದು ಹೇಳಿದರು.
ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ ಮಾತನಾಡಿ, ಕಕ್ಕಡ 18 ಆಚರಣೆಯ ವಿಶೇಷತೆಯಲ್ಲಿ ತೀವ್ರ ಚಳಿ, ಶೀತದ ವಾತಾವರಣ ಹಾಗೂ ಕೃಷಿ ಚಟುವಟಿಕೆಯಲ್ಲಿ ನಿರತರಾದ ಸಂದರ್ಭ ಜನರ ಆರೋಗ್ಯ ರಕ್ಷಣೆಗೆ ಆಹಾರವನ್ನು ಪೂರ್ವಜರು ವೈಜ್ಞಾನಿಕವಾಗಿ ನಿರ್ಧರಿಸಿದ್ದಾರೆ. ಪ್ರಕೃತಿಯಿಂದ ನಾವು ಆಹಾರವನ್ನು ಪಡೆಯುತ್ತೇವೆ. ಆದ್ದರಿಂದ ಪ್ರಕೃತಿಯನ್ನು ರಕ್ಷಿಸಬೇಕು ಹಾಗೂ ಪೂಜೆ ಮಾಡಬೇಕು. ಎಂದಿಗೂ ನಾಶ ಮಾಡಬಾರದು ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕೊಡವ ಹಿತಾರಕ್ಷಣಾ ಬಳಗದ ಅಧ್ಯಕ್ಷ ಚಿರಿಯಪಂಡ ರಾಜಾ ನಂಜಪ್ಪ ಮಾತನಾಡಿ, ಕೊಡಗಿನಲ್ಲಿ ಅಂಬಲಗಳು ನ್ಯಾಯ ತೀರ್ಮಾನದ ಕೇಂದ್ರಗಳಾಗಿದ್ದವು. ಅವುಗಳು ಇದ್ದರೆ ಊರಿಗೆ ಒಳಿತಾಗುತ್ತದೆ. ಹಾಗೆಯೇ ಮಂದ್‌ಗಳು ಸಾಂಸ್ಕೃತಿಕ ಹಾಗೂ ಧಾರ್ಮಿಕ ಕೇಂದ್ರಗಳಾಗಿದ್ದು ಅವುಗಳು ಉಳಿದರೆ ನಾಡಿಗೆ ಒಳಿತಾಗುತ್ತದೆ ಎಂಬ ಮಾತಿದೆ. ಅದರಿಂದ ಪ್ರತಿಯೊಬ್ಬರೂ ತಮ್ಮ ಸಮಯದಲ್ಲಿ ಕೊಡವ ಜನಾಂಗದ ಸಂಸ್ಕೃತಿ ನಾಡು, ನುಡಿ, ನೆಲ-ಜಲ ಹಿತರಕ್ಷಣೆಗೆ ಸೇವೆ ಸಲ್ಲಿಸಬೇಕೆಂದು ಕರೆ ನೀಡಿದರು.
ಬಳಗದ ಉಪಾಧ್ಯಕ್ಷ ಚೆಕ್ಕೇರ ರಮೇಶ್, ಚಿರಿಯಪಂಡ ರಾಜಾ ನಂಜಪ್ಪ ಉಪಸ್ಥಿತರಿದ್ದರು. ಪೊನ್ನಂಪೇಟೆ ರಾಮಕೃಷ್ಣ ಆಶ್ರಮದ ಹಿರಿಯ ವೈದ್ಯಾಧಿಕಾರಿ ಡಾ.ಬಿಜ್ಜಂಡ ಕಾರ್ಯಪ್ಪ ಮತ್ತು ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ವೈದ್ಯಾಧಿಕಾರಿ ಡಾ.ಮುಕ್ಕಾಟೀರ ಗ್ರೀಷ್ಮ ಬೋಜಮ್ಮ ಅವರನ್ನು ಸನ್ಮಾನಿಸಲಾಯಿತು. ಹತ್ತನೇ ತರಗತಿಯಲ್ಲಿ ಪ್ರಥಮ ಸ್ಥಾನ ಪಡೆದ ಲಯನ್ಸ್ ಶಾಲಾ ವಿದ್ಯಾರ್ಥಿ ಕಾಟಿಮಾಡ ಭಾಷಿತ ದೇವಯ್ಯ ಹಾಗೂ ಪೊನ್ನಂಪೇಟೆ ಸಿಐಟಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಪ್ರಥಮ ಸ್ಥಾನ ಪಡೆದ ಚೆಪ್ಪುಡೀರ ಹರ್ಷಿಣಿ ಪ್ರದೀಪ್ ಅವರನ್ನು ಸನ್ಮಾನಿಸಿ, ಪ್ರೋತ್ಸಾಹಕರ ಬಹುಮಾನ ನೀಡಲಾಯಿತು.