

ಬಾಗಲಕೋಟೆ: ದೇಶದ ಸಮಗ್ರ ಅಭಿವೃದ್ಧಿ ಕನಸಿನೊಂದಿಗೆ ಲೋಕಸಭೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮಾಜಿ ಶಾಸಕ ಡಾ. ವೀರಣ್ಣ ಚರಂತಿಮಠ ಹೇಳಿದರು.
ನಗರದ ಬಿವಿವಿ ಸಂಘದ ನೂತನ ಸಭಾಭವನದಲ್ಲಿ ಸೋಮವಾರ ಬಿಜೆಪಿ ಬಾಗಲಕೋಟೆ ವಿಧಾನಸಭಾ ಮತಕ್ಷೇತ್ರದಿಂದ ಹಮ್ಮಿಕೊಂಡಿದ್ದ ಗ್ರಾಮ ಚಲೋ ಅಭಿಯಾನದ ಪೂರ್ವಭಾವಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಅಟಲ್ ಬಿಹಾರಿ ವಾಜಪೇಯಿ, ಲಾಲ್‌ಕೃಷ್ಣ ಆಡ್ವಾಣಿ ಜತೆಗೆ ನರೇಂದ್ರ ಮೋದಿ ಅವರನ್ನು ಬಿಜೆಪಿ ನೀಡಿದೆ. ದೇಶದ ಸಮಗ್ರ ಅಭಿವೃದ್ಧಿಗೆ ಕಂಕಣ ಬದ್ಧವಾಗಿದೆ. ಕಾಶ್ಮೀರ 370 ವಿಧಿ, ತ್ರಿವಳಿ ತಲಾಖ್ ನಿಷೇಧ, ಶ್ರೀರಾಮ ಮಂದಿರ, ಕಾಶಿ ವಿಶ್ವನಾಥ ಮತ್ತು ಉಜ್ಜಯಿನಿಯ ಸೋಮನಾಥ ದೇವಾಲಯ ಕಾರಿಡಾರ್ ಸೇರಿ ಭಾರತದ ಅಧ್ಯಾತ್ಮದ ಪುನರುಜ್ಜೀವನಗೊಳಿಸಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ ಎಂದರು.
ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸುವ ಗುರಿ ಪಕ್ಷದ ಕಾರ್ಯಕರ್ತರ ಮುಂದಿದೆ. ಕಿಸಾನ್ ಸಮ್ಮಾನ ಯೋಜನೆ, ಪಿ.ಎಂ.ಸಲ್ ಬಿಮಾ ಯೋಜನೆ, ಡಿಜಿಟಲ್ ಕ್ರಾಂತಿ, ಉಜ್ವಲ್ ಗ್ಯಾಸ್ ಯೋಜನೆ, ಆಯುಷ್ಮಾನ್ ಭಾರತ ಸೇರಿ ಜನ ಪರ ಯೋಜನೆಗಳನ್ನು ಜನರ ಮುಂದೆ ಇಡಬೇಕು. ಈ ಗ್ರಾಮ ಚಲೋ ಅಭಿಯಾನ ಯಶಸ್ವಿಗೊಳಿಸಬೇಕು ಎಂದು ಹೇಳಿದರು. ವಿಪ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ, ಮುಖಂಡರಾದ ಡಾ.ಎಂ.ಎಸ್.ದಡ್ಡೆನ್ನವರ, ಗುಂಡುರಾವ ಶಿಂಧೆ, ಸುರೇಶ ಕೊಣ್ಣೂರ, ಸತ್ಯನಾರಾಯಣ ಹೇಮಾದ್ರಿ, ರಾಜು ನಾಯ್ಕರ, ಸದಾನಂದ ನಾರಾ, ರಾಜು ಮುದೆನೂರ, ಶಿವಾನಂದ ಟವಳಿ, ಬಸವರಾಜ ಅವರಾದಿ, ಜ್ಯೋತಿ ಭಜಂತ್ರಿ, ಸುಜಾತಾ ತತ್ರಾಣಿ, ಸರಸ್ವತಿ ಕುರಬರ, ಶಿವಲೀಲಾ ಪಟ್ಟಣಶೆಟ್ಟಿ, ಶಶಿಕಲಾ ಮಜ್ಜಗಿ, ಶೋಭಾರಾವ್ ಇತರರು ಇದ್ದರು.