

ಮಡಿಕೇರಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿ ಪ್ರತಿಷ್ಠಾಪಿಸಿ ಪೂಜಿಸುವ ಬದಲು ಅವರನ್ನು ಹಾಗೂ ಅವರ ಆದರ್ಶಗಳನ್ನು ಓದಿ ಅರ್ಥ ಮಾಡಿಕೊಳ್ಳುವ ಅಗತ್ಯವಿದೆ ಎಂದು ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ದಸಂಸ ಕೊಡಗು ಜಿಲ್ಲಾ, ತಾಲೂಕು ಪದಾಧಿಕಾರಿಗಳ ಆಯ್ಕೆ, ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಪ್ರೊ.ಬಿ.ಕೃಷ್ಣಪ್ಪ ಅವರ ನೆನಪು ಮತ್ತು ಸಂಘಟನೆಯ ಹೋರಾಟದ ವಿಚಾರಗಳ ಮನನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ಅತ್ಯುತ್ತಮ ಸಂವಿಧಾನ ನೀಡುವ ಮೂಲಕ ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ. ಅಸ್ಪಶ್ಯತೆಯ ವಿರುದ್ಧ ಹೋರಾಡಿ ಮಹಾನಾಯಕ ಎನಿಸಿಕೊಂಡಿದ್ದಾರೆ ಎಂದು ಬಣ್ಣಿಸಿದರು.
ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಪ್ರಜಾಪ್ರಭುತ್ವದ ಬದಲು ಧರ್ಮ ಕೆಲಸ ಮಾಡುತ್ತಿದೆ. ಸಂವಿಧಾನ ವಿರೋಧಿ ಕೃತ್ಯಗಳು ಹೆಚ್ಚುತ್ತಿದ್ದು, ಇದು ಮುಂದುವರೆದಲ್ಲಿ ದಲಿತರು ಮತ್ತೆ ಎರಡು ಸಾವಿರ ಹಿಂದಿನ ದಿನಗಳಿಗೆ ಮರಳುವ ಪರಿಸ್ಥಿತಿ ಎದುರಾಗಬಹುದು ಎಂದು ಆರೋಪಿಸಿದರು. ಸಂವಿಧಾನದ ಆಶಯಗಳನ್ನು ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ, ಯುವ ಪೀಳಿಗೆಗೂ ಅರ್ಥ ಮಾಡಿಸಬೇಕಿದೆ ಎಂದರು.
ಸಂಘಟನೆ ಎಂಬುವುದು ಉದ್ಯೋಗವಲ್ಲ. ಅದೊಂದು ಸಮಾಜ ಸೇವೆ ಎಂದ ಗುರುಮೂರ್ತಿ, ಸಂಘಟನೆಗೆ ಬರುವವರು ಬಡವರ ಕಣ್ಣೀರು ಒರೆಸುವ ಕೆಲಸ ಮಾಡಬೇಕೆ ಹೊರತು ಸಂಘಟನೆಯ ಹೆಸರನ್ನು ಬಳಸಿಕೊಂಡು ಹಣ ಮಾಡುವ ವಸೂಲಿಗಾರರಾಗಬಾರದೆಂದು ಕಿವಿ ಮಾತು ಹೇಳಿದರು. ತಲೆಯಲ್ಲಿ ಜ್ಞಾನ, ಎದೆಯಲ್ಲಿ ಕಿಚ್ಚು ಹೊಂದಿರುವವರು ಸಾಮಾಜಿಕ ಕ್ರಾಂತಿ ಮಾಡಲು ಸಾಧ್ಯ ಎಂದರು.
ನಗರಸಭಾ ಮಾಜಿ ಅಧ್ಯಕ್ಷ ಹಾಗೂ ಅಂಬೇಡ್ಕರ್ ಭವನದ ಅಧ್ಯಕ್ಷ ಎಚ್.ಎಂ.ನಂದಕುಮಾರ್, ಸಮಿತಿಯ ಜಿಲ್ಲಾ ಸಂಚಾಲಕಿ ಗಾಯತ್ರಿ ನರಸಿಂಹ, ರಾಜ್ಯ ಸಂಘಟನಾ ಸಂಚಾಲಕ ಆರ್.ವೆಂಕಟೇಶ್ ನಾಗಮಂಗಲ, ಬಿ.ಎನ್.ಗಂಗಾಧರಪ್ಪ, ಫಕೀರಪ್ಪ ಮುಂಡಗೋಡ, ಮಹಿಳಾ ಒಕ್ಕೂಟದ ರಾಜ್ಯ ಸಂಚಾಲಕಿ ರತ್ನಮ್ಮ ಜೀವಿಕ ಇತರರಿದ್ದರು.