ದಾರ್ಶನಿಕರನ್ನು ಒಂದು ವರ್ಗಕ್ಕೆ ಸೀಮಿತಗೊಳಿಸುವುದು ಸಲ್ಲ

18KDR1
Published on

ಕಡೂರು: ಕಾವ್ಯ ಹಾಗೂ ಕೀರ್ತನೆಗಳ ಮೂಲಕ ಸಮಾಜದ ಕಂದಾಚಾರಗಳನ್ನು ಹೋಗಲಾಡಿಸಲು ಶ್ರಮಿಸಿದ ಕನಕದಾಸರು ವಿಶ್ವಮಾನವರಾದರು ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ನಡೆದ 537ನೇ ಕನಕ ಜಯಂತಿಯ ಕಾರ್ಯಕ್ರಮದಲ್ಲಿ ಮಾತನಾಡಿ, ದೇವರ ದೃಷ್ಟಿಯಲ್ಲಿ ಎಲ್ಲರೂ ಒಂದೇ ಆದರೂ ಸಮಾಜದಲ್ಲಿರುವ ಜಾತೀಯತೆಯ ಸಂಕುಚಿತ ಮನೋಭಾವ ದೂರವಾಗಬೇಕು ಎಂಬ ಹಂಬಲ ಕನಕದಾಸರದ್ದಾಗಿತ್ತು ಎಂದರು.

ಸಮ ಸಮಾಜದ ನಿರ್ಮಾಣ ನಮ್ಮ ಚಿಂತನೆಯಾಗಬೇಕಿದೆ. ಇಂದಿನ ಸಮಾಜ ಜಾತಿ ವ್ಯವಸ್ಥೆ ಹಿಡಿತದಲ್ಲಿದ್ದು, ಮಹಾನ್ ದಾರ್ಶನಿಕರನ್ನು ಒಂದು ವರ್ಗಕ್ಕೆ ಸೀಮಿತಗೊಳಿಸಿರುವುದು ವಿಪರ್ಯಾಸ. ಕನಕದಾಸ, ಬಸವೇಶ್ವರ, ಅಂಬೇಡ್ಕರ್ ಸೇರಿದಂತೆ ಮುಂತಾದ ಮಹಾನ್ ಚೇತನಗಳನ್ನು ಜಾತಿ ಚೌಕಟ್ಟಿನಲ್ಲಿ ಇಡದೇ ಅವರು ಎಲ್ಲ ಸಮಾಜಗಳಿಗೂ ಸೇರಿದವರೆಂಬ ವಿಶಾಲ ಮನೋಭಾವ ಮೈಗೂಡಿಸಿಕೊಳ್ಳಬೇಕಿದೆ. ಕನಕದಾಸರು ಬಂದು ತಂಗಿದ್ದ ಜಾಗ ಕನಕರಾಯನ ಗುಡ್ಡಕ್ಕೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಿ ಅದನ್ನು ಪುಣ್ಯಕ್ಷೇತ್ರ ಮತ್ತು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಶ್ರಮಿಸಲಾಗುವುದು ಎಂದರು.

ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಕನಕದಾಸರು ಒಂದು ವರ್ಗದ ಪ್ರತಿನಿಧಿಯಲ್ಲ. ನಮ್ಮ ಸಂಸ್ಕೃತಿಯ ಪ್ರತಿನಿಧಿ, ಅಂತರಂಗದ ಮಾರ್ಗದರ್ಶಿಯಾಗಿ ನಾಡಿಗೆ ಅವರ ದಾಸ ಸಾಹಿತ್ಯ ನೀಡಿದ ಕೊಡುಗೆ ಅಪಾರ. ತಮ್ಮ ಕೀರ್ತನೆಗಳ ಮೂಲಕ ಜನರ ಹೃದಯದಲ್ಲಿ ಆಧ್ಯಾತ್ಮಿಕ ಜಾಗೃತಿ ತುಂಬಿದ ಕನಕದಾಸರು ವಿಶ್ವಕ್ಕೆ ಮಾನವ ಬದುಕಿನ ಮೌಲ್ಯಗಳನ್ನು ಕೊಡುಗೆಯಾಗಿ ನೀಡಿದ್ದಾರೆ ಅವರ ಆದರ್ಶಗಳನ್ನು ನಾವು ಅಳವಡಿಸಿಕೊಳ್ಳಬೇಕಿದೆ ಎಂದರು.

ತಹಸೀಲ್ದಾರ್ ಪೂರ್ಣಿಮಾ, ತಾಪಂ ಇಒ ಸಿ.ಆರ್.ಪ್ರವೀಣ್, ಬೀರೂರು ಪುರಸಭೆ ಅಧ್ಯಕ್ಷೆ ವನಿತಾ ಮಧು, ಪುರಸಭೆ ಸದಸ್ಯರಾದ ತೋಟದಮನೆ ಮೋಹನ್‌ಕುಮಾರ್, ಈರಳ್ಳಿ ರಮೇಶ್, ಯಗಟಿ ಗೋವಿಂದಪ್ಪ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net