

ಗುಳೇದಗುಡ್ಡ: ಆದಾಯ ಕೊರತೆ ನೆಪ ಹೇಳಿ ರಾಜ್ಯದ 9 ವಿವಿ ಮುಚ್ಚಲು ಹೊರಟಿರುವ ಸರ್ಕಾರದ ಕ್ರಮ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮಂಗಳಾ ಎಂ. ಅವರಿಗೆ ಮನವಿ ಸಲ್ಲಿಸಲಾಯಿತು.
ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯ ಕೇಂದ್ರಗಳು. ಅಲ್ಲಿಂದ ಹೊರಡುವ ವಿದ್ಯಾರ್ಥಿಗಳು ದೇಶದ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸುವ ವ್ಯಕ್ತಿಗಳಾಗುತ್ತಾರೆ. ಅಂತಹ ವಿಶ್ವವಿದ್ಯಾಲಯಗಳಿಗೆ ಮೂಲಸೌಲಭ್ಯ ನೀಡುವುದು ಸರ್ಕಾರಗಳ ಆದ್ಯ ಕರ್ತವ್ಯ. ಆದರೆ, ರಾಜ್ಯದಲ್ಲಿ ಹಿಂದಿನ ಸರ್ಕಾರ ಘೋಷಣೆ ಮಾಡಿದ್ದ ಹೊಸ ವಿಶ್ವವಿದ್ಯಾಲಯಗಳನ್ನು ಇಂದಿನ ಸರ್ಕಾರ ಮುಚ್ಚಲು ಹೊರಟಿರುವುದು ಸರಿಯಲ್ಲ ವಿದ್ಯಾರ್ಥಿಗಳು ದೂರಿದರು.
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ ನೇತೃತ್ವದ ಸಚಿವ ಸಂಪುಟ ಉಪಸಮಿತಿಯು ಆರ್ಥಿಕ ಹಾಗೂ ಮೂಲಸೌಲಭ್ಯ ಕೊರತೆ ನೆಪ ಹೇಳಿ ವಿಶ್ವವಿದ್ಯಾಲಯಗಳನ್ನು ಮುಚ್ಚಲು ಹೊರಟಿರುವುದು ಶಿಕ್ಷಣ ವಿರೋಧಿ ನೀತಿಯಾಗಿದೆ. ಸಾಮಾನ್ಯವಾಗಿ 10,000 ವಿದ್ಯಾರ್ಥಿಗಳಿಗೆ ಒಂದು ವಿಶ್ವವಿದ್ಯಾಲಯ ಇರಬೇಕೆಂಬುವುದು ಆದರ್ಶ ವಿಚಾರವಾಗಿದೆ. ಆದರೆ ನಮ್ಮಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆಗೆ ಹೋಲಿಕೆ ಮಾಡಿದರೆ ಈಗಿರುವ ವಿಶ್ವವಿದ್ಯಾಲಯಗಳ ಸಂಖ್ಯೆ ಕಡಿಮೆ ಇದೆ. ವಿದ್ಯಾರ್ಥಿಗಳು ಅಂಕಪಟ್ಟಿ, ಪ್ರಮಾಣಪತ್ರ ಹಾಗೂ ಇನ್ನಿತರ ಸಮಸ್ಯೆಗಳ ಪರಿಹಾರಕ್ಕೆ ಸುಮಾರು 200 ಕಿಮೀ ಪ್ರಯಾಣ ಮಾಡಬೇಕು. ಇಂತಹ ಸಮಸ್ಯೆ ಪರಿಹಾರಕ್ಕೆ ಹೊಸ ವಿವಿಗಳು ಸಹಕಾರಿಯಾಗಬೇಕು ಎಂದರು ಆಗ್ರಹಿಸಿದರು.
ಯಾವುದೇ ಸರ್ಕಾರ ಬಂದರೂ ಘೋಷಣೆ ಮಾಡಿದ ವಿಶ್ವವಿದ್ಯಾಲಯಗಳನ್ನು ಅಭಿವೃದ್ಧಿಪಡಿಸಬೇಕೆ ಹೊರತು ಅತಂತ್ರಗೊಳಿಸಬಾರದು. ರಾಜ್ಯದಲ್ಲಿ ಆಳ್ವಿಕೆ ಮಾಡುತ್ತಿರುವ ರಾಜ್ಯ ಸರ್ಕಾರ ಎರಡು ವರ್ಷ ಕಳೆದರೂ ವಿವಿ ಅಭಿವೃದ್ಧಿಗೆ ಕಿಂಚಿತ್ತೂ ಗಮನಕೊಡದೆ, ಈಗ ಮುಚ್ಚುತ್ತಿರುವುದನ್ನು ನೋಡಿದರೆ ಸರ್ಕಾರ ವಿದ್ಯಾರ್ಥಿ ವಿರೋಧಿ. ಶಿಕ್ಷಣ ವಿರೋಧಿ ನೀತಿಯನ್ನು ಅನುಸರಿಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ ಎಂದು ಆರೋಪಿಸಿದರು.
ಎಬಿವಿಪಿ ಜಿಲ್ಲಾ ಸಂಚಾಲಕ ಪ್ರಥಮೇಶ ವಾಘಮೋಡೆ, ನಗರ ಕಾರ್ಯದರ್ಶಿ ಅಮಿತ ವಾಲಾದ, ಭುವನೇಶ ಪೂಜಾರಿ, ಲಕ್ಷ್ಮಣ ಭಜಂತ್ರಿ, ದೀಪಕ್ ರಾಥೋಡ, ಪವನ್ ಉಂಕಿ, ಅಪ್ಪುರಾಜ ಚವಾಣ, ಮಂಜುನಾಥ್ ರಾಥೋಡ, ಆಕಾಶ ಚವಾಣ, ಮೈತ್ರಿ ರಾಜನಾಳ, ಸಂಗೀತಾ ಶಿರೂರು, ಶಂಕ್ರಮ್ಮ ಮುರುಗೋಡ, ಶಶಾಂಕ ಸಿಂದಗಿ, ಸಂಜನಾ ಚಂದಾಪುರ, ಸೌಂದರ್ಯ ಅರುಟಗಿ, ದೃಶಾಂತ ಹೂಲಗೇರಿ, ಈರಣ್ಣ ಹಡಪದ, ನಾಗರತ್ನ ರಂಜಂಗಿ, ಶಿವುಕುಮಾರ ಬಾದವಾಡಗಿ, ಪ್ರಭು ಕಳ್ಳಿಗುಡ್ಡ ಇತರರು ಇದ್ದರು.