

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ಪ್ರಕರಣದಲ್ಲಿ ರಾಜ್ಯಪಾಲರು ನೀಡಿರುವ ನೋಟೀಸಿಗೆ ಈಗಾಗಲೇ ಉತ್ತರ ನೀಡಲಾಗಿದ್ದು, ಅದನ್ನು ರಾಜಪಾಲರು ಒಪ್ಪಿಕೊಳ್ಳುವ ನಂಬಿಕೆಯಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಮುಡಾ ವಿಷಯದಲ್ಲಿ ಸಂಪೂರ್ಣವಾಗಿ ಕಾನೂನು ಪ್ರಕಾರ ನಡೆದಿರುವುದರಿಂದ ರಾಜ್ಯಪಾಲರು ಸರ್ಕಾರದ ಉತ್ತರವನ್ನು ಒಪ್ಪಿಕೊಳ್ಳುವ ನಂಬಿಕೆಯಿದೆ. ಮುಡಾ ನಿವೇಶನ ಹಂಚಿಕೆಯಲ್ಲಿ ಯಾವುದೇ ರೀತಿಯ ಪ್ರಭಾವವನ್ನು ನಾನು ಬೀರಿಲ್ಲ. ಕಾನೂನು ಪ್ರಕಾರವಾಗಿರುವ ಹಿನ್ನೆಲೆಯಲ್ಲಿಯೇ ಬಿಜೆಪಿ ಸರ್ಕಾರದ ಅವಧಿಯಲ್ಲಿ 2021ರಲ್ಲಿ ನನ್ನ ಪತ್ನಿಗೆ ಬದಲಿ ನಿವೇಶನ ನೀಡಲಾಗಿದೆ ಎಂದು ಅವರು ಹೇಳಿದರು.
2014ರಲ್ಲಿ ನಾನು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ನನ್ನ ಪತ್ನಿ, ಮುಡಾ ಅಕ್ರಮವಾಗಿ ನಮ್ಮ ಜಮೀನು ಸ್ವಾಧೀನಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಬದಲಿ ನಿವೇಶನ ಕೋರಿ ಅರ್ಜಿ ಸಲ್ಲಿಸಿದ್ದಳು. ಆ ಸಂದರ್ಭದಲ್ಲಿ ನಾನು ಈ ಕುರಿತು ಯಾವುದೇ ಕ್ರಮಗಳನ್ನು ಕೈಗೊಂಡಿರಲಿಲ್ಲ.