ತಾಲೂಕು ಕಚೇರಿ ಬಳಿಯೇ ಕೋರ್ಟ್ ಸ್ಥಾಪನೆ ಸೂಕ್ತ

ತಾಲೂಕು ಕಚೇರಿ ಬಳಿಯೇ ಕೋರ್ಟ್ ಸ್ಥಾಪನೆ ಸೂಕ್ತ
Published on

ಬೇಲೂರು: ಜೆಎಂಎಫ್‌ಸಿ ನ್ಯಾಯಾಲಯ ಪಟ್ಟಣದ ಹೊರ ವಲಯದಲ್ಲಿರುವುದರಿಂದ ಜನಸಾಮಾನ್ಯರಿಗೆ ಅನನುಕೂಲವಾಗುತ್ತಿದೆ. ಆದ್ದರಿಂದ ತಾಲೂಕು ಕಚೇರಿಯ ಆಸುಪಾಸಿನಲ್ಲೇ ನ್ಯಾಯಾಲಯ ನಿರ್ಮಿಸುವುದು ಸೂಕ್ತ ಎಂದು ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಹಾಸನ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಎಚ್.ಟಿ.ನರೇಂದ್ರ ಪ್ರಸಾದ್ ಹೇಳಿದರು.

ಪಟ್ಟಣದ ಹೊರ ವಲಯದಲ್ಲಿರುವ ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

ಈ ನ್ಯಾಯಾಲಯದಲ್ಲಿ 6 ಸಾವಿರಕ್ಕೂ ಹೆಚ್ಚು ಪ್ರಕರಣಗಳಿವೆ ಎಂಬ ಹಿನ್ನೆಲೆಯಲ್ಲಿ ಹೆಚ್ಚುವರಿ ನ್ಯಾಯಾಲಯ ನೀಡಲಾಗಿದೆ. ಮುಂದಿನ ದಿನಗಳಲ್ಲಿ ವಕೀಲರ ಜವಾಬ್ದಾರಿ ಜಾಸ್ತಿ ಇದೆ. ಕಕ್ಷಿದಾರರನ್ನು ಯಾವುದೇ ಕಾರಣಕ್ಕೂ ಅಲೆಯುವಂತೆ ಮಾಡಬೇಡಿ, ಜತೆಗೆ ನ್ಯಾಯಾಲಯದಲ್ಲಿ ಕನಿಷ್ಠ ಒಂದು ಸುಸಜ್ಜಿತವಾದ ಸಭಾಂಗಣವಿರಬೇಕು. ಇಂದು ಕಟ್ಟಡದ ಒಂದು ಮೂಲೆಯಲ್ಲಿ ಕಾರ್ಯಕ್ರಮ ಆಯೋಜಿಸಿರುವುದು ತೃಪ್ತಿ ತಂದಿಲ್ಲ. ಸ್ಥಳೀಯ ಶಾಸಕರ ಸಹಕಾರ ಪಡೆದು ಶೀಘ್ರ ವಕೀಲರ ಭವನ, ಗ್ರಂಥಾಲಯ, ಸಭಾಂಗಣ, ವಸತಿ ಗೃಹಕ್ಕೆ ಪ್ರಸ್ತಾವನೆ ಕಳಿಹಿಸಿಕೊಡಿ ಎಂದರು.

ಇತ್ತೀಚಿನ ದಿನಗಳಲ್ಲಿ ನ್ಯಾಯಾಂಗ ಇಲಾಖೆಗೆ ಹೆಣ್ಣು ಮಕ್ಕಳು ಬರುತ್ತಿರುವುದು ಸಂತಸದ ವಿಷಯ. ಅಲ್ಲದೆ ಪ್ರತಿ ಮೂರು ತಿಂಗಳಿಗೊಮ್ಮೆ ಕಾರ್ಯಾಗಾರ ಏರ್ಪಡಿಸುವುದರಿಂದ ಯುವ ವಕೀಲರಿಗೆ ಹೆಚ್ಚಿನ ಕಾನೂನಿನ ಅರಿವು ಮೂಡಿಸಿದಂತಾಗಲಿದೆ. ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಒಂದು ವಕೀಲರ ಭವನ ನಿರ್ಮಿಸುವುದಾದರೆ ಹೆಚ್ಚಿನ ಸಹಕಾರ ಒದಗಿಸಲಾಗುವುದು ಎಂದರು.

ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಮಾತನಾಡಿ, ನ್ಯಾಯಾಲಯದಲ್ಲಿ ನ್ಯಾಯಾಧೀಶರು, ವಕೀಲರು ಮತ್ತು ಸಿಬ್ಬಂದಿ ಮೊದಲು ಕಕ್ಷಿದಾರರನ್ನು ಅನ್ನದಾತರು ಎಂದು ಗೌರವಿಸಿದರೆ ಮಾತ್ರ ನ್ಯಾಯಾಂಗ ಇಲಾಖೆಯ ಘನತೆ ಉಳಿಯುತ್ತದೆ. ನಿಮ್ಮ ಬಳಿ ಬರುವಂತಹ ನೊಂದವರಿಗೆ ಅಲೆಯುವಂತೆ ಮಾಡಬೇಡಿ. ಆದಷ್ಟು ಕಡಿಮೆ ಶುಲ್ಕದಲ್ಲಿ ಅವರಿಗೆ ಸಹಾಯ ಮಾಡಿದಾಗ ಮಾತ್ರ ಅವರ ಬೆವರಿಗೆ ಬೆಲೆ ಬರುತ್ತದೆ ಎಂದರು.

ಮಲೆನಾಡು ಭಾಗದ ವಕೀಲರು ಬೆಳಗ್ಗೆ ವಕೀಲಿ ವೃತ್ತಿ, ಮಧ್ಯಾಹ್ನ ತೋಟ ಎನ್ನುವ ಬದಲು ಸಂಪೂರ್ಣ ನ್ಯಾಯಾಂಗದಲ್ಲಿ ತೊಡಗಿಸಿಕೊಂಡು ನ್ಯಾಯ ಕೊಡಿಸಬೇಕು. ವಕೀಲರಿಗೆ ತನ್ನದೇ ಆದ ಹಿನ್ನೆಲೆ ಇದೆ. ಸ್ವಾತಂತ್ರ್ಯ ಹೋರಾಟ ಮತ್ತು ಸಂವಿಧಾನ ರಚನೆಯಲ್ಲಿ ವಕೀಲರು ಶ್ರಮಿಸಿದ ಬಗ್ಗೆ ತಿಳಿಯಿರಿ. ವಿಶ್ವಮಾನವ ಧರ್ಮ ಪಾಲಿಸುವ ನಿಟ್ಟಿನಲ್ಲಿ ಎಲ್ಲರೂ ಮುಂದಾಗಿ. ತಾವು ದುಡಿಯುವ ದುಡಿಮೆಯಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ಕಾಳಜಿ ವಹಿಸಿ ಎಂದು ಸಲಹೆ ನೀಡಿದರು.

ಈಗಾಗಲೇ ಬೇಲೂರಿನ ನ್ಯಾಯಾಲಯಕ್ಕೆ 7 ಎಕರೆ ಜಾಗ ಮೀಸಲಿಟ್ಟಿದ್ದು, ಭವಿಷ್ಯದ ದೃಷ್ಟಿಯಿಂದ ಉತ್ತಮ ಕಟ್ಟಡವಾಗಲಿ. ಅಲ್ಲದೆ ಶಾಸಕರ ಸಹಕಾರ ಪಡೆದು ತಕ್ಷಣವೇ ವಕೀಲರ ಭವನ ನಿರ್ಮಾಣದ ಜತೆಗೆ ಗ್ರಂಥಾಲಯ ಮಾಡುವುದು ಮುಖ್ಯ. ಮುಂದೆ ಲೋಕ ಅದಾಲತ್ ಬರುತ್ತಿದ್ದು, ನಿಮ್ಮೆಲ್ಲರ ಸಹಕಾರ ಮುಖ್ಯ ಎಂದು ಹೇಳಿದರು.

ಆರು ಸಾವಿರ ಪ್ರಕರಣ: ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ಬೇಲೂರಿನ ನ್ಯಾಯಾಲಯದಲ್ಲಿ 6 ಸಾವಿರ ಪ್ರಕರಣಗಳಿವೆ. ತ್ವರಿತ ಇತ್ಯರ್ಥ್ಯಕ್ಕೆ ಹೆಚ್ಚುವರಿ ನ್ಯಾಯಾಲಯದ ಅವಶ್ಯವಿರುವ ನಿಟ್ಟಿನಲ್ಲಿ ವಕೀಲರ ಕೋರಿಕೆಯಂತೆ ಹೆಚ್ಚುವರಿ ನ್ಯಾಯಾಲಯವಾಗಿದೆ. ವಕೀಲರ ಹಿತ ದೃಷ್ಟಿಯಿಂದ ನ್ಯಾಯಾಧೀಶರು ಸರ್ಕಾರಕ್ಕೆ ಮನವಿ ಸಲ್ಲಿಸಿದರೆ ವಕೀಲರ ಭವನ ಹಾಗೂ ನ್ಯಾಯಾಧೀಶರಿಗೆ ಹೆಚ್ಚುವರಿ ಕಟ್ಟಡ ನಿರ್ಮಿಸಲು ನಾನು ಸನ್ನದ್ಧನಾಗುತ್ತೇನೆ. ಈ ನ್ಯಾಯಾಲಯಕ್ಕೆ ಬೇಕಾದ ಎಲ್ಲ ಮೂಲಸೌಕರ್ಯ ಒದಗಿಸಲು ಬದ್ಧನಿದ್ದೇನೆ. ನ್ಯಾಯಾಲಯದ ಮುಂಭಾಗದ ವೈಡಿಡಿ ಕಾಲೇಜು ಆವರಣದಲ್ಲಿ 4 ಕೋಟಿ ರೂ. ವೆಚ್ಚದಲ್ಲಿ ಕಲಾಮಂದಿರ ನಿರ್ಮಾಣಕ್ಕೆ ಶೀಘ್ರ ಭೂಮಿ ಪೂಜೆ ಮಾಡಲಾಗುವುದು ಎಂದರು.

ಹಾಸನ ಜಿಲ್ಲಾ ನ್ಯಾಯಾಧೀಶೆ ಹೇಮಾವತಿ, ಬೇಲೂರು ನ್ಯಾಯಾಲಯದ ನ್ಯಾಯಾಧೀಶೆ ಶಶಿಕಲಾ, ನಾಗೇಂದ್ರ, ಸಲ್ಮಾ. ಲೋಕೋಪಯೋಗಿ ಇಲಾಖೆ ಅಧೀಕ್ಷಕ ಅಭಿಯಂತರೆ ನಳಿನಾ, ಕಾರ್ಯನಿರ್ವಾಹಕ ಅಭಿಯಂತರ ಗಿರೀಶ್, ವಕೀಲರ ಸಂಘದ ಅಧ್ಯಕ್ಷ ಸಿ.ಎಂ.ಪೃಥ್ವಿ, ಕಾರ್ಯದರ್ಶಿ ಪುಟ್ಟಸ್ವಾಮಿಗೌಡ, ಉಪಾಧ್ಯಕ್ಷ ದಿಲೀಪ್, ಹಿರಿಯ ವಕೀಲರಾದ ಲಿಂಗೇಶ್, ಚಂದ್ರೇಗೌಡ, ನಟರಾಜ್, ಸರ್ಕಾರಿ ಅಭಿಯೋಜಕರಾದ ಶಶಿಕಲಾ, ಗೀತಾಮಣಿ ಇತರರು ಇದ್ದರು.

ವಕೀಲರ ಸಂಘದ ಕೊಠಡಿ ತುಂಬಾ ಚಿಕ್ಕದಾಗಿದೆ. ಜತೆಗೆ ನ್ಯಾಯಾಲಯದ ಆವರಣದಲ್ಲೇ ಇರುವುದರಿಂದ ವಕೀಲರಿಗೆ ತುಂಬ ತೊಂದರೆಯಾಗುತ್ತಿದೆ. ನ್ಯಾಯಾಲಯದ ಪಕ್ಕದಲ್ಲಿ ಎರಡು ಎಕರೆ ಜಮೀನಿದ್ದು, ನಮಗೆ ಒಂದು ಸುಸಜ್ಜಿತವಾದ ವಕೀಲರ ಸಂಘದ ಕಟ್ಟಡ ಹಾಗೂ ಗ್ರಂಥಾಲಯ ನಿರ್ಮಿಸಿದರೆ ಅನುಕೂಲವಾಗುತ್ತದೆ. ಅದಕ್ಕೆ ನಮ್ಮ ನ್ಯಾಯಾಧೀಶರು ಪತ್ರ ಬರೆಯಲು ಸೂಚಿಸಿದ್ದು, ಶಾಸಕರು ಈ ಬಗ್ಗೆ ಗಮನ ಹರಿಸಿ ಸಹಕಾರ ನೀಡಬೇಕಿದೆ.

  • ಸಿ.ಎಂ.ಪೃಥ್ವಿ, ಅಧ್ಯಕ್ಷ, ವಕೀಲರ ಸಂಘ, ಬೇಲೂರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net